14ನೇ ಐಪಿಎಲ್ ಟೂರ್ನಿಯ 39ನೇ ಪಂದ್ಯದಲ್ಲಿ ಆರ್ ಸಿಬಿ 54 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಪರಾಭವಗೊಳಿಸಿದೆ.
ಈ ಗೆಲುವಿನೊಂದಿಗೆ ಆರ್ ಸಿಬಿ ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಆಡಿರುವ 10 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿರುವ ವಿರಾಟ್ ಪಡೆ ಒಟ್ಟು ಆರು ಅಂಕಗಳನ್ನು ಪಡೆದುಕೊಂಡಿದೆ .
ಇನ್ನೊಂದೆಡೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆಡಿರುವ 10 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದ್ದು, ಒಟ್ಟು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ. ದುಬೈ ನಲ್ಲಿ ಟಾಸ್ ಸೋತ ಆರ್ ಸಿಬಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು ಆರಂಭಿಕ ದೇವದತ್ ಪಡಿಕ್ಕಲ್ ಶೂನ್ಯ ಸುತ್ತಿ ಆರಂಭದಲ್ಲೇ ಶಾಕ್ ಅನುಭವಿಸಿತ್ತು. ಆದ್ರೆ ನಾಯಕ ವಿರಾಟ್ ಕೊಹ್ಲಿ ಬಿರುಸಿನ ಆಟಕ್ಕೆ ಮುಂದಾದ್ರು. ಅಲ್ಲದೆ ಸ್ರಿಕರ್ ಭರತ್ ಕೂಡ ಕೊಹ್ಲಿಗೆ ಉತ್ತಮ ಸಾಥ್ ನೀಡಿದ್ರು. ಸ್ರೀಕರ್ ಭರತ್ 32 ರನ್ ಗಳಿಸಿದ್ರು.
ಬಳಿಕ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವಿರಾಟ್ ಕೊಹ್ಲಿ ಮುಂಬೈ ಬೌಲರ್ ಗಳಿಗೆ ಸವಾಲಾಗಿ ಪರಿಣಮಿಸಿದ್ರು. ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 51 ರನ್ ಸಿಡಿಸಿದ್ರು. ಮತ್ತೊಂದೆಡೆ ಮ್ಯಾಕ್ಸ್ ವೆಲ್ ಕೂಡ ಬಿರುಸಿನ ಆಟವನ್ನಾಡಿದ್ರು. ಮ್ಯಾಕ್ಸ್ ವೆಲ್ 37 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ನೆರವಿನಿಂದ 56 ರನ್ ದಾಖಲಿಸಿದ್ರು. ಎಬಿಡಿ 11 ರನ್ ಗೆ ಸುಸ್ತಾದ್ರು. ಅಂತಿಮವಾಗಿ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 165 ರನ್ ದಾಖಲಿಸಿತು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭವನ್ನೇ ಪಡೆದುಕೊಂಡಿತ್ತು. 6.4 ಓವರ್ ಗಳಲ್ಲಿ 57 ರನ್ ದಾಖಲಿಸಿ ಆರ್ ಸಿಬಿಗೆ ಸೋಲಿನ ಭಯವನ್ನು ಮೂಡಿಸಿತ್ತು. ಆದ್ರೆ ಕ್ವಿಂಟನ್ ಡಿ ಕಾಕ್ 24 ರನ್ ಗಳಿಸಿ ಔಟಾದ್ರೆ, ರೋಹಿತ್ ಶರ್ಮಾ 43 ರನ್ ದಾಖಲಿಸಿ ಪೆವಿಲಿಯನ್ ದಾರಿ ಹಿಡಿದ್ರು. ನಂತರ ಇಶಾನ್ ಕಿಶಾನ್, ಸೂರ್ಯ ಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಕಿರಾನ್ ಪೊಲಾರ್ಡ್ ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು. ಆರ್ ಸಿಬಿಯ ದಿಟ್ಟ ಬೌಲಿಂಗ್ ದಾಳಿಗೆ ಮುಂಬೈ ಬ್ಯಾಟ್ಸ್ ಮೆನ್ ಗಳು ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್ 18.1 ಓವರ್ ಗಳಲ್ಲಿ 111 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತ್ತು.
ಹರ್ಷೆಲ್ ಪಟೇಲ್ ನಾಲ್ಕು ವಿಕೆಟ್ ಉರುಳಿಸಿದ್ರೆ, ಯುಜುವೇಂದ್ರ ಚಾಹಲ್ ಮೂರು ವಿಕೆಟ್ ಹಾಗು ಗ್ಲೇನ್ ಮ್ಯಾಕ್ಸ್ ವೆಲ್ ಎರಡು ವಿಕೆಟ್ ಪಡೆದ್ರು. ಆಲ್ ರೌಂಡ್ ಆಟವನ್ನಾಡಿದ ಮ್ಯಾಕ್ಸ್ ವೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.








