ಶಿವಂ ಮಾವಿ 21 ರನ್ಗೆ 4 ವಿಕೆಟ್, ಪರ್ಗ್ಯೂಸನ್ 18 ರನ್ಗೆ 3 ವಿಕೆಟ್ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಅಕ್ಷರಶಃ ನಡುಗಿತ್ತು. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 86 ರನ್ಗಳ ಹೀನಾಯ ಸೋಲು ಅನುಭವಿಸಿತು. ಭರ್ಜರಿ ಜಯ ದಾಖಲಿಸಿದ ಕೆಕೆಆರ್ ಪಂಜಾಬ್ ತಂಡವನ್ನು ಟೂರ್ನಿಯಿಂದ ಹೊರಹೋಗುವಂತೆ ಮಾಡಿತು. ಕೊನೆಯ ಲೀಗ್ ಮ್ಯಾಚ್ ಆಡಲಿರುವ ಮುಂಬೈ ತಂಡಕ್ಕೆ ಅಸಾಧ್ಯ ಅನ್ನುವ ಲೆಕ್ಕಾಚಾರವನ್ನು ಮುಂದೆ ಇಟ್ಟಿತು.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಶಾರ್ಜಾ ಪಿಚ್ನ ಮರ್ಮ ಅರಿತಿದ್ದ ಶುಭ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಆರಂಭದಲ್ಲಿ ನಿಧಾನವಾಗಿ ಆಡಿದರು. ಪವರ್ ಪ್ಲೇನ 6 ಓವರುಗಳಲ್ಲಿ ಈ ಜೋಡಿ ಗಳಿಸಿದ್ದು ಕೇವಲ 34 ರನ್. 7ನೇ ಓವರ್ನಿಂದ ಆಟದ ಶೈಲಿ ಬದಲಿಸಿದ ಗಿಲ್ ಮತ್ತು ಅಯ್ಯರ್ ಬೌಂಡರಿ ಮತ್ತು ಸಿಕ್ಸರ್ಗಳನ್ನು ಬಾರಿಸಲು ಆರಂಭಿಸಿದರು. ಅಯ್ಯರ್3 5ಎಸೆತಗಳಲ್ಲಿ 38 ರನ್ ಸಿಡಿಸಿ ಔಟಾದರು. ನಿತೀಶ್ ರಾಣಾ 12 ರನ್ಗಳಿಸಿ ಡಗ್ಔಟ್ ಸೇರಿಕೊಂಡರು.
ಶುಭ್ಮನ್ ಗಿಲ್ ಸತತ 2ನೇ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದರು. ಅಂತಿಮವಾಗಿ ಗಿಲ್ 44 ಎಸೆತಗಳಲ್ಲಿ 56 ರನ್ ಸಿಡಿಸಿದರು. ರಾಹುಲ್ ತ್ರಿಪಾಠಿ ಬಿರುಸಿನ 21 ರನ್ಗಳಿಸಿ ಔಟಾದರು. 20 ಓವರುಗಳಲ್ಲಿ ಕೆಕೆಆರ್ 4 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತ್ತು.
ಗುರಿ ಬೆನ್ನಟ್ಟಲು ಶುರು ಮಾಡಿದ ರಾಜಸ್ಥಾನ ರಾಯಯ್ಸ್ ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡಿತು. ಮೊದಲ ಓವರ್ನಲ್ಲಿ ಶಕೀಬ್ ಅಲ್ ಹಸನ್ ಯಶಸ್ವಿ ಜೈಸ್ವಾಲ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಶಿವಂ ಮಾವಿ ಸಂಜು ಸ್ಯಾಮ್ಸನ್ ವಿಕೆಟ್ ಪಡೆದರು. ಫರ್ಗ್ಯೂಸನ್ ಲಿವಿಂಗ್ ಸ್ಟೋನ್ ಮತ್ತು ಅನುಜ್ ರಾವತ್ ವಿಕೆಟ್ ಪಡೆದು ರಾಯಲ್ಸ್ಗೆ ಶಾಕ್ ನೀಡಿದರು. ಪವರ್ ಪ್ಲೇನಲ್ಲಿ ರಾಯಲ್ಸ್ ಕೇವಲ 17 ರನ್ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು.
ಈ ಹಂತದಲ್ಲಿ ಮತ್ತೊಂದು ಸ್ಪೆಲ್ನಲ್ಲಿ ದಾಳಿಗಿಳಿದ ಮಾವಿ 18 ರನ್ಗಳಿಸಿದ್ದ ದುಬೆ ವಿಕೆಟ್ ಪಡೆದರು. ಗ್ಲೆನ್ ಫಿಲಿಫ್ಸ್ ಕೂಡ 8 ರನ್ಗಳಿಸಿದ್ದಾಗ ಅಂದಾಜು ತಪ್ಪಿದರು. ಇನ್ನೊಂದು ಕಡೆ ರಾಹುಲ್ ತೆವಾಟಿಯಾ ಸಿಕ್ಸರ್ ಬೌಂಡರಿಗಳಿಂದ ಅಬ್ಬರಿಸುತ್ತಿದ್ದರು. ಆದರೆ ಅವರಿಗೆ ಯಾರು ಸಾಥ್ ನೀಡಲಿಲ್ಲ. ಕ್ರಿಸ್ ಮೊರಿಸ್ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರೆ, ಫರ್ಗ್ಯೂಸನ್ ಉನದ್ಕಟ್ ವಿಕೆಟ್ ಪಡೆದರು. ಸಕಾರಿಯಾ ರನೌಟ್ ಬಲೆಯಲ್ಲಿ ಬಿದ್ದರು.. 44 ರನ್ಗಳಿಸಿದ್ದ ತೆವಾಟಿಯಾ ಮಾವಿ ಎಸೆತದಲ್ಲಿ ಔಟಾಗುವುದರೊಂದಿಗೆ ರಾಯಲ್ಸ್ 16.1 ಓವರುಗಳಲ್ಲಿ 85 ರನ್ಗಳಿಗೆ ಆಲೌಟ್ ಆಯಿತು. ಕೆಕೆಆರ್ 86 ರನ್ಗಳ ಭರ್ಜರಿ ಜಯ ದಾಖಲಿಸಿತು. 4 ವಿಕೆಟ್ ಕಬಳಿಸಿದ ಶಿವಂ ಮಾವಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.









