IPL 2022 | ಕ್ಯಾಪ್ಟನ್ ಆಟವಾಡಿ ದಾಖಲೆ ಪಡೆದ “ಲಯನ್”..!!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಐದು ವಿಕೆಟ್ ಗಳಿಂದ ಸೋಲು ಕಂಡಿದೆ.
ಬಿ.ವೈ.ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ಗಳು ಅಬ್ಬರಿಸಿದರು.
ಇದೇ ಮೊದಲ ಬಾರಿಗೆ ನಾಯಕರಾಗಿ ಐಪಿಎಲ್ ನಲ್ಲಿ ಮೊದಲ ಪಂದ್ಯವಾಡಿದ ಫಾಫ್ ಡುಪ್ಲಸಿಸ್, ಪಂಜಾಬ್ ಬೌಲರ್ ಗಳ ಮೇಲೆ ಸವಾರಿ ಮಾಡಿದರು.
ಅನೂಜ್ ರಾವತ್ ಜೊತೆ ಸೇರಿಕೊಂಡು ಆರಂಭದಿಂದಲೇ ಅಬ್ಬರಿಸಿದ ಫಾಪ್ ಡುಪ್ಲಸಿ, ಚೆಂಡಿಗೆ ಅಷ್ಟದಿಕ್ಕುಗಳ ಪರಿಚಯ ಮಾಡಿದರು.
57 ಎಸೆತಗಳಲ್ಲಿ 3 ಬೌಂಡರಿ ಮತ್ತು ಬರೋಬ್ಬರಿ 7 ಸಿಕ್ಸರ್ ಗಳ ನೆರವಿನಿಂದ 88 ರನ್ ಗಳಿಸಿ ಮಿಂಚಿದರು.
ಅಂದಹಾಗೆ ಒಂದು ಹಂತದಲ್ಲಿ ಫಾಫ್ ಡುಪ್ಲಸಿ 30 ಎಸೆತಗಳಲ್ಲಿ ಕೇವಲ 17 ರನ್ ಗಳಿಸಿದ್ದರು, ಆದ್ರೆ ಮುಂದಿನ 71 ರನ್ ಗಳಿಸಿಲು ಡುಪ್ಲಸಿ ಕೇವಲ 27 ಎಸೆತಗಳನ್ನು ಮಾತ್ರ ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ಚೊಚ್ಚಲ ಬಾರಿಗೆ ನಾಯಕನಾದ ಡುಪ್ಲೆಸಿಸ್ ಅಪರೂಪದ ಸಾಧನೆ ಮಾಡಿದ್ದಾರೆ.
ಅದು ಏನಂದರೇ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ 3 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಅಲ್ಲದೇ ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರರಾಗಿ ದಾಖಲೆ ಬರೆದರು.
ಇನ್ನು ಡುಪ್ಲಸಿ 3,000 ರನ್ ಗಳಿಸಲು 94 ಇನ್ನಿಂಗ್ಸ್‌ಗಳನ್ನ ತೆಗೆದುಕೊಂಡಿದ್ದಾರೆ. ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ 75 ಇನ್ನಿಂಗ್ಸ್ ಗಳಲ್ಲಿ 3000 ರನ್ ಗಳ ಗಡಿ ದಾಟಿದ್ದರೇ. ಕನ್ನಡಿಗ ಕೆಎಲ್ ರಾಹುಲ್ 80 ಇನ್ನಿಂಗ್ಸ್ 3 ಸಾವಿರ ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಮೂರನೇ ಸ್ಥಾನದಲ್ಲಿ ಡೇವಿಡ್ ವಾರ್ನರ್, ಮತ್ತು ಫಾಫ್ ಡುಪ್ಲಸಿ ಇದ್ದಾರೆ. ಈ ಇಬ್ಬೂರ 94 ಇನ್ನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಗಳಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಸುರೇಶ್ ರೈನಾ ಇದ್ದಾರೆ. ಇವರು 103 ಇನ್ನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಗಡಿ ದಾಟಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಈ ಗುರಿಯನ್ನ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 19 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದರು.