lsg vs dc | ಛೋಟಾ ಭೀಮ್ ಹೋರಾಟ ವ್ಯರ್ಥ.. ಲಕ್ನೋಗೆ ಗೆಲುವು
15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂರನೇ ಗೆಲುವು ದಾಖಲಿಸಿದೆ.
ಡಿ ವೈ ಪಾಟೀಲ್ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಆರು ವಿಕೆಟ್ ಗಳಿಂದ ಜಯ ಸಾಧಿಸಿದೆ.
ಈ ಆವೃತ್ತಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯವನ್ನ ಸೋತಿದೆ.
ಇದರೊಂದಿಗೆ ಆರು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಎರಡನೇ ಸೋಲನುಭವಿಸಿದೆ.
ಡಿ.ವೈ ಪಾಟೀಲ್ ಮೈದಾನದಲ್ಲಿಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪೃಧ್ವಿ ಶಾ ಅಬ್ಬರದ ಬ್ಯಾಟಿಂಗ್ ನೊಂದಿಗೆ ಉತ್ತಮ ಆರಂಭ ನೀಡಿದರು.
ಪೃಥ್ವಿ ಶಾ ಅವರ ಬೌಂಡರಿ ಮತ್ತು ಸಿಕ್ಸರ್ ಗಳ ಅಬ್ಬರಕ್ಕೆ ಸಹ ಆಟಗಾರ ಡೇವಿಡ್ ವಾರ್ನರ್ ಮೂಕ ಪ್ರೇಕ್ಷಕರಾದ್ರು.
30 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದ ಪೃಥ್ವಿ ಶಾ ಲಕ್ನೋ ಬೌಲರ್ ಗಳಿಗೆ ದುಃಸ್ವಪ್ನವಾಗಿ ಕಾಡಿದ್ರು.
ಅಂತಿಮವಾಗಿ ಗೌತಮ್ ಎಸೆತದಲ್ಲಿ 61 ರನ್ ಗಳಿಸಿದ್ದ ಪೃಥ್ವಿ ಶಾ ಪೆವಿಲಿಯನ್ ಸೇರಿಕೊಂಡ್ರು. ಪೃಥ್ವಿ ಶಾ 9 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 61 ರನ್ ಗಳಿಸಿದ್ರು.
ಪೃಥ್ವಿ ಶಾ ವಿಕೆಟ್ ಬೀಳುತ್ತಿದ್ದಂತೆ ಡೇವಿಡ್ ವಾರ್ನರ್ 4 ರನ್ ಹಾಗೂ ರೊವ್ಮನ್ ಪೊವೆಲ್ 3 ರನ್ ಗಳಿಸಿ ರವಿ ಬಿಷ್ಣೋಯ್ ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ್ರು.
ಕೊನೆಯಲ್ಲಿ ರಿಷಬ್ ಪಂತ್ 39 ರನ್ ಮತ್ತು ಸಫ್ರಾಝ್ ಖಾನ್ 36 ರನ್ ದಾಖಲಿಸಿದ್ರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು.
ಸವಾಲನ್ನು ಬೆನ್ನಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕ ಕೆ.ಎಲ್. ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭವನ್ನೇ ನೀಡಿದ್ರು.
ಇವರಿಬ್ಬರು ಮೊದಲ ವಿಕೆಟ್ ಗೆ 73 ರನ್ ಕಲೆ ಹಾಕಿದ್ದರು. ಈ ಹಂತದಲ್ಲಿ 24 ರನ್ ಗಳಿಸಿದ್ದ ಕೆ.ಎಲ್. ರಾಹುಲ್ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದ್ರು.
ಮತ್ತೊಂದೆಡೆ ಎವಿನ್ ಲೆವಿಸ್ 5 ರನ್ ಹಾಗೂ ದೀಪಕ್ ಹೂಡಾ 11 ರನ್ ಗಳಿಸಿ ನಿರಾಸೆಗೊಳಿಸಿದ್ರು.
ಇದಾದ ಬಳಿಕ ಬಿರುಸಿನ ಆಟವನ್ನ ಮುಂದುವರೆಸಿದ ಕ್ವಿಂಟನ್ ಡಿ ಕಾಕ್, 52 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 82 ರನ್ ದಾಖಲಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ರು.
ಕೊನೆಯ ಕ್ಷಣದಲ್ಲಿ ಕೃನಾಲ್ ಪಾಂಡ್ಯ ಮತ್ತು ಆಯೂಷ್ ಬಡೋನಿ ಜವಾಬ್ದಾರಿಯುತವಾದ ಆಟವನ್ನಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. IPL 2022 LSG vs DC Highlights









