IPL 2022 | ರಾಜಸ್ಥಾನ್ ರಾಯಲ್ಸ್ ತಂಡದ ಸೋಲಿಗೆ ಕಾರಣಗಳು..
15 ನೇ ಸೀಸನ್ ನ ಐಪಿಎಲ್ ಟೈಟಲ್ ಗೆದ್ದು ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ನಾಯಕ ಶೇನ್ ವಾರ್ನ್ ಅವರಿಗೆ ಗೌರವ ಸಮರ್ಪಣೆ ಮಾಡಬೇಕು ಎಂದುಕೊಂಡಿದ್ದ ಆರ್ ಆರ್ ತಂಡದ ಆಸೆ ಕೊನೆಗೂ ಈಡೇರಲೇ ಇಲ್ಲ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ನಿರಾಸೆ ಅನುಭವಿಸಿದೆ.
ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಗೆ ಎಂಟ್ರಿ ಕೊಟ್ಟ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಚೊಚ್ಚಲ ಪ್ರಯತ್ನದಲ್ಲಿಯೇ ಚಾಂಪಿಯನ್ ಪಟ್ಟಕೇರಿದೆ. ಆ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಇತಿಹಾಸ ಬರೆದಿದೆ.
ಇತ್ತ ನಿರ್ಣಾಯಕ ಪಂದ್ಯದಲ್ಲಿ ಎಡವಟ್ಟು ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ತಂಡ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಮಿಸ್ ಮಾಡಿಕೊಂಡಿದೆ.
ಹಾಗಾದ್ರೆ ಫೈನಲ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ಗೆಲುವಿಗೆ ಮುಳುವಾದ ಅಂಶಗಳು ಯಾವುವು ಅಂತಾ ನೋಡೊದಾದ್ರೆ..
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ
ರಾಜಸ್ಥಾನ್ ರಾಯಲ್ಸ ತಂಡ ಈ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿತ್ತು. ಆದರೆ ಅಚ್ಚರಿಯೆಂಬಂತೆ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಳೆದ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರನ್ ಬೆನ್ನಟ್ಟಿ ಅದ್ಭುತ ಗೆಲುವು ಸಾಧಿಸಿದ್ದರೂ ಸಂಜು ಸ್ಯಾಮ್ಸನ್ ಮೊದಲಿಗೆ ಬ್ಯಾಟಿಂಗ್ ನಡೆಸುವ ಧೈರ್ಯ ತೋರಿಸಿದ್ದು ಯಾಕೆ ಅನ್ನೋದು ಮಿಲಿಯನ್ ಡಾಲರ್ಸ್ ಪ್ರಶ್ನೆಯಾಗಿದೆ. ಕ್ವಾಲಿಫೈಯರ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಹೇಳಿದಂತೆ ಅಹ್ಮದಾಬಾದ್ ಪಿಚ್ ಚೇಸಿಂಗ್ ಮಾಡಲು ಅನುಕೂಲಕರವಾಗಿದೆ. ಮೊದಲು ಬೌಲರ್ ಗಳಿಗೆ ಸಹಾಯಕವಾಗಿದೆ ಎಂದಿದ್ದರು. ಆದ್ರೂ ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿದ್ದು ಯಾಕೆ ಅಂತಾ ಗೊತ್ತಾಗಲಿಲ್ಲ.
ಒತ್ತಡದಲ್ಲಿದ್ದ ಬ್ಯಾಟರ್ ಗಳು
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದಾಗ ರಾಯಲ್ಸ್ ಪಡೆಯಲ್ಲಿ ಒತ್ತಡ ಎದ್ದು ಕಾಣುತ್ತಿತ್ತು. ಇದರ ಸಹಾಯ ಪಡೆದುಕೊಂಡ ಗುಜರಾತ್ ಟೈಟಾನ್ಸ್ ತಂಡದ ಬೌಲರ್ ಗಳು ರಾಜಸ್ಥಾನ್ ಮೇಲೆ ಸವಾರಿ ಮಾಡಿದರು. ಅದರಲ್ಲೂ ಬಟ್ಲರ್ ವಿಕೆಟ್ ಬೀಳುತ್ತಿದ್ದೆಂತೆ ರಾಯಲ್ಸ್ ಪಾಳಯ ಮಂಕಾಯ್ತು. ಆರ್ ಆರ್ ಬ್ಯಾಟರ್ ಗಳು ಒತ್ತಡವನ್ನು ಭರಿಸಲಾರದೇ ಪೆವಿಲಿಯನ್ ಪರೇಡ್ ನಡೆಸಿದರು. ಬಟ್ಲರ್ ವಿಕೆಟ್ ಬೀಳುತ್ತಿದ್ದಂತೆ ಎಚ್ಚರಿಕೆಯ ಆಟಕ್ಕೆ ಮೊರೆ ಹೋದ ಆರ್ ಆರ್ ಬ್ಯಾಟರ್ ಗಳು, ಎದುರಾಳಿಗಳ ಮೇಲೆ ಆಕ್ರಮಣಕಾರಿ ಮುಗಿಬೀಳಲೇ ಇಲ್ಲ.
ಪವರ್ ಪ್ಲೇನಲ್ಲಿ ಎಡವಟ್ಟು..
ಆರ್ ಆರ್ ತಂಡಕ್ಕೆ ಬ್ಯಾಟಿಂಗ್ ಮಾಡುವ ಪವರ್ ಪ್ಲೇನಲ್ಲಿ ಉತ್ತಮ ಆರಂಭ ಸಿಕ್ಕತ್ತು. ಆದ್ರೆ ಅದನ್ನ ಇನ್ನುಳಿದ ಬ್ಯಾಟರ್ ಗಳು ಬಳಸಿಕೊಳ್ಳಲಿಲ್ಲ. ಇದಾದ ಬಳಿಕ ಬೌಲಿಂಗ್ ನಲ್ಲಿಯೂ ಕೂಡ ರಾಯಲ್ಸ್ ಉತ್ತಮ ಆರಂಭ ಪಡೆದ್ರೂ, ನಂತರ ಟೈಟಾನ್ಸ್ ಮೇಲೆ ಒತ್ತಡ ಹೇರುವಲ್ಲಿ ರಾಜಸ್ಥಾನ್ ವಿಫಲವಾಯ್ತು.
ಈ ಎಲ್ಲಾ ಕಾರಣಗಳಿಂದ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಅನುಭವಿಸಿದೆ ಅಂತಾ ಹೇಳಬಹುದಾಗಿದೆ.