IPL | ಆ ದೇಶದಲ್ಲಿ ಐಪಿಎಲ್ ಪ್ರಸಾರ ಬಂದ್
ಇಂಡಿಯನ್ ಪ್ರಿಮಿಯರ್ ಲೀಗ್ ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ನಡೆಯುವ ಈ ರಿಚ್ ಟೂರ್ನಿಗಾಗಿ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ವಿಶ್ವ ಕ್ರಿಕೆಟ್ ನ ಸೂಪರ್ ಸ್ಟಾರ್ ಗಳು ಒಂದೇ ತಂಡದಲ್ಲಿ ಅಬ್ಬರಿಸೋದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎದುರಾಳಿಗಳಾದವರು ಐಪಿಎಲ್ ನಲ್ಲಿ ಒಂದೇ ತಂಡದ ಪರ ಆಡೋದನ್ನ ನೋಡಲು ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿರುತ್ತಾರೆ.
ರಣ ರೋಚಕ ಪಂದ್ಯಗಳು.. ಬೌಂಡರಿ ಸಿಕ್ಸರ್ ಗಳ ಧಮಾಖ.. ಬ್ಯಾಟರ್ – ಬೌಲರ್ ಗಳ ಅಬ್ಬರ.. ಈ ಎಲ್ಲಾ ಕಾರಣಗಳಿಂದಾಗಿ ಇಂಡಿಯನ್ ಪ್ರಿಮಿಯರ್ ಲೀಗ್ ವಿಶ್ವದ ಎಲ್ಲಾ ಲೀಗ್ ಗಳಿಗಿಂತಲೂ ಸಾಕಷ್ಟು ವಿಭಿನ್ನವಾಗಿದೆ. ಈ ನಡುವೆ ನೆರೆಯ ಶ್ರೀಲಂಕಾದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಪ್ರಸಾರವನ್ನು ಸ್ಥಗತಿಗೊಳಿಸಲಾಗಿದೆ.
ಹೌದು..! ಸದ್ಯ ಶ್ರೀಲಂಕಾಗೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಅಲ್ಲಿ ಐಪಿಎಲ್ ಪ್ರಸಾರ ಮಾಡುವ ಯಪ್ ಟಿವಿ, ಎಸ್ ಎಲ್ ಆರ್ ಸಿ, ಡೈಲಾಗ್ ಟಿವಿ ಚಾನಲ್ ಗಳಿಗೆ ಪ್ರಸಾರದ ಹಕ್ಕುಗಳನ್ನ ಖರೀದಿಸಲು ಹಣದ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಐಪಿಎಲ್ ಪ್ರಸಾರ ಸ್ಥಗಿತಗೊಂಡಿದೆ.
ಅಲ್ಲಿನ ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ತುರ್ತು ಪರಿಸ್ಥಿತಿಯಿಂದಾಗಿ ದೇಶದ ಜನರು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿ ಆನಂದಿಸುವ ಮನಸ್ಥಿತಿಯಲ್ಲಿಲ್ಲ. ಆದ್ದರಿಂದ ಶ್ರೀಲಂಕಾದ ಚಾನಲ್ ಗಳು ಐಪಿಎಲ್ ಪ್ರಸಾರದ ಬಗ್ಗೆ ತಲೆಕಡೆಸಿಕೊಂಡಿಲ್ಲ ಎನ್ನುತ್ತಿವೆ.
ಮತ್ತೊಂದೆಡೆ, ಕಾಗದದ ಬೆಲೆ ಹೆಚ್ಚಳ ಮತ್ತು ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅಲ್ಲಿನ ಪ್ರತಿಕೆಗಳು ಇರುವುದರಿಂದ ಪತ್ರಿಕೆಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಕನಿಷ್ಠ ಡಿಜಿಟಲ್ ಪೇಪರ್‌ಗಳಲ್ಲಿಯೂ ಐಪಿಎಲ್ ಸುದ್ದಿಗಳ ಉಲ್ಲೇಖವಿಲ್ಲ.
ಇತ್ತ ಶ್ರೀಲಂಕಾದ ಕ್ರಿಕೆಟಿಗರಾದ ವನಿಂದು ಹಸರಂಗ ಆರ್‌ಸಿಬಿ ಯಲ್ಲಿ, ಭಾನುಕಾ ರಾಜಪಕ್ಸೆ ಪಂಜಾಬ್ ನಲ್ಲಿ, ದುಷ್ಮಂತ ಚಮೀರಾ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ, ಚಾಮಿಕಾ ಕರುಣಾರತ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಅಬ್ಬರಿಸುತಿದ್ದಾರೆ. ಈ ನಡುವೆ ಶ್ರೀಲಂಕಾ ಕ್ರಿಕೆಟ್ ನ ದಿಗ್ಗಜರಾದ ಸನತ್ ಜಯಸೂರ್ಯ, ಕುಮಾರ್ ಸಂಗಾಕರ, ಮಹೇಲಾ ಜಯವರ್ದನೆ, ಲಂಕಾಧಿಪತಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸನತ್ ಜಯ ಸೂರ್ಯ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ipl-2022-tournament-broadcast-goes-sri-lanka









