IPL 2022 : RCBಗೆ ಮತ್ತೆ ವಿರಾಟ್ ಕ್ಯಾಪ್ಟನ್ ಆಗಬೇಕಂತೆ..
ಈ ಬಾರಿಯ ಐಪಿಎಲ್-2022ರಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಈ 10 ತಂಡಗಳ ಪೈಕಿ 7 ತಂಡಗಳು ಈಗಾಗಲೇ ನಾಯಕರನ್ನು ನೇಮಿಸಿಕೊಂಡಿವೆ. ಇನ್ನುಳಿದ ಮೂರು ತಂಡಗಳಾದ ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಕೆಆರ್ ತಂಡಗಳು ನಾಯಕರ ಹುಡುಕಾಟದಲ್ಲಿವೆ. ಇದರಲ್ಲಿ ಆರ್‌ಸಿಬಿ ವಿಚಾರಕ್ಕೆ ಬಂದರೆ ಐಪಿಎಲ್-2021ರ ನಂತರ ನಾಯಕತ್ವ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳೆಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಬಗ್ಗೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ತಂಡವನ್ನು ಮುನ್ನಡೆಸಲು ಒಪ್ಪಿಕೊಂಡರೆ ಯಾರೂ ಆಶ್ಚರ್ಯಪಡಬೇಕಾಗಿಲ್ಲ ಎಂದಿದ್ದಾರೆ.
“ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ತಂಡವನ್ನು ಕಟ್ಟಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಜೊತೆಗೆ ನಾಯಕನ ಹುಡುಕಾಟದಲ್ಲೂ ಇದೆ. ಆದರೆ, ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಇನ್ನೆರಡು ವರ್ಷ ನಾಯಕನಾಗಿರಲು ಒಪ್ಪಿಕೊಂಡರೆ ಆಶ್ಚರ್ಯವಿಲ್ಲ. ಭವಿಷ್ಯದಲ್ಲಿ ತಂಡವನ್ನು ಮುನ್ನಡೆಸಬಲ್ಲ ಯುವ ಆಟಗಾರನನ್ನು ನೇಮಸಿಕೊಳ್ಳಬೇಕು. ಭಾರತದ ಆಟಗಾರರ ಪೈಕಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಇಬ್ಬರೂ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲರು. ಇಶಾನ್ ಕಿಶನ್ ಅಥವಾ ಶ್ರೇಯಸ್ ಅಯ್ಯರ್ ಅವರನ್ನು ಹರಾಜಿನಲ್ಲಿ ಆರ್ ಸಿಬಿ ಖರೀದಿಸಿದ್ರೆ ಭವಿಷ್ಯದ ನಾಯಕರಾಗುತ್ತಾರೆ. ಇದುವರೆಗೆ ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಆರ್‌ಸಿಬಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳಬೇಕಾಗುತ್ತದೆ ಎಂದು ಹರ್ಭಜನ್ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.









