IPL 2022 | ಕ್ವಾಲಿಫೈಯರ್-2ನಲ್ಲಿ ಅಬ್ಬರಿಸದ ʼರನ್ ಮಷಿನ್ʼ
ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಅಬ್ಬರಿಸಿರುವ ವಿರಾಟ್ ಕೊಹ್ಲಿ ಪ್ಲೇ ಆಫ್ಸ್ ಹಂತದಲ್ಲಿ ನಿರೀಕ್ಷಿತ ಆಟವಾಡಿಲ್ಲ.
ನಿರ್ಣಾಯಕ ಕ್ವಾಲಿಫೈಯರ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತ ವೈಫಲ್ಯಗಳನ್ನು ಕಂಡು ನಿರಾಸೆ ಮೂಡಿಸಿದ್ದಾರೆ.
ಶುಕ್ರವಾರ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವೈಫಲ್ಯ ಮತ್ತೆ ಮುಂದುವರೆಯಿತು.
15 ನೇ ಸೀಸನ್ ನ ಕ್ವಾಲಿಫೈಯರ್ 2 ಮೊಟೇರಾ ಅಂಗಳದಲ್ಲಿ ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು.
ನಾಕೌಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 157 ರನ್ ಗಳಿಸಿತು.
ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 18.1 ಓವರ್ ಗಳಲ್ಲಿ ಗುರಿ ಮುಟ್ಟಿತು. ಇದರೊಂದಿಗೆ ಬೆಂಗಳೂರು ತಂಡದ ಅಭಿಯಾನ ಇಲ್ಲಿಗೆ ಮುಕ್ತಾಯವಾಗಿದ್ದರೇ, ರಾಜಸ್ಥಾನ್ ಫೈನಲ್ ಪ್ರವೇಶಿಸಿದೆ.
ಆದ್ರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿರೀಕ್ಷೆಗೆ ತಕ್ಕಂತೆ ಆಡಲೇ ಇಲ್ಲ. 15ನೇ ಆವೃತ್ತಿಯಲ್ಲಿ ತಮ್ಮ ಖದರ್ ತೋರಿಸುವಲ್ಲಿ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಇಂಡಿಯಲ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೂ ಮೂರು ಬಾರಿ ಮಾತ್ರ ಕ್ವಾಲಿಫೈಯರ್-2 ಪ್ರವೇಶಿಸಿದೆ.
ಈ ಎಲ್ಲಾ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ, ದೊಡ್ಡ ಮೊತ್ತ ಕಲೆಹಾಕಿಲ್ಲ. ಈ ಹಿಂದೆ ಆಡಿರುವ ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ವಿರಾಟ್ ಕೊಹ್ಲಿ, 8 ರನ್ ಮತ್ತು 12 ರನ್ಗಳಿಗೆ ಔಟಾಗಿದ್ದಾರೆ.
ಇದೀಗ 2022ರ ಐಪಿಎಲ್ನ ಕ್ವಾಲಿಫೈಯರ್-2ನಲ್ಲಿ 7 ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಆ ಮೂಲಕ ಐಪಿಎಲ್ನ ಕ್ವಾಲಿಫೈಯರ್-2 ಪಂದ್ಯಗಳಲ್ಲಿನ ತಮ್ಮ ಬ್ಯಾಟಿಂಗ್ ವೈಫಲ್ಯವನ್ನ ಮುಂದುವರಿಸಿದರು.
ಅಂದಹಾಗೆ 2022ರ ಐಪಿಎಲ್ನ ಆರಂಭದಿಂದಲೂ ನೀರಸ ಪ್ರದರ್ಶನ ನೀಡುತ್ತಿರುವ ಕಿಂಗ್ ಕೊಹ್ಲಿ, 16 ಪಂದ್ಯಗಳಿಂದ 341 ರನ್ಗಳಿಸಿದ್ದಾರೆ.
22.73ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಕೊಹ್ಲಿ, 115.99ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕೊಹ್ಲಿ ಅವರ ಈ ಪ್ರದರ್ಶನದಲ್ಲಿ ಕೇವಲ 2 ಅರ್ಧಶತಕ ಬಂದಿದೆ.
ipl-2022- Virat Kohli gets out cheaply again