IPL: ಯಾರ ಪಾಲಾಗಲಿದೆ ಐಪಿಎಲ್ ಮೀಡಿಯಾ ರೈಟ್..?
15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಹೊಸ ತಂಡವಾದ ಗುಜರಾತ್ ಟೈಟಾನ್ಸ್ ಚೊಚ್ಚಲ ಪ್ರಯತ್ನದಲ್ಲಿಯೇ ಚಾಂಪಿಯನ್ ಆಗಿದೆ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದೆ. ಫಾಫ್ ಡುಪ್ಲಸಿಸ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನದಲ್ಲಿ, ಕೆ.ಎಲ್.ರಾಹುಲ್ ಕ್ಯಾಪ್ಟನ್ಸಿಯ ಲಕ್ನೋ ಸೂಪರ್ ಜೈಂಟ್ಸ್ ತಂಡ ನಾಲ್ಕನೇ ಸ್ಥಾನದಲ್ಲಿ ಟೂರ್ನಿಯನ್ನ ಮುಗಿಸಿವೆ.
ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಗೆ ಆರೆಂಜ್ ಕ್ಯಾಪ್ ದೊರೆತರೇ.. ಯುಜವೇಂದ್ರ ಚಹಾಲ್ ಪರ್ಪಲ್ ಕ್ಯಾಪ್ ಗೆದ್ದುಕೊಂಡಿದ್ದಾರೆ. ಇದೆಲ್ಲಾ ಈಗ ಇತಿಹಾಸ.
ಆದ್ರೂ ಇಂಡಿಯನ್ ಪ್ರಿಮಿಯರ್ ಲೀಗ್ ಮೇಲಿನ ಕುತೂಹಲ ಮಾತ್ರ ಅಂತ್ಯ ಕಂಡಿಲ್ಲ. ಅದಕ್ಕೆ ಕಾರಣ ಇಂಡಿಯನ್ ಪ್ರಿಮಿಯರ್ ಲೀಗ್ ನ ಮೀಡಿಯಾ ರೈಟ್ಸ್ ಬಿಡ್ಡಿಂಗ್.
ಹೌದು..! ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರಿಮಿಯರ್ ಲೀಗ್ ನ ಮಾಧ್ಯಮ ಹಕ್ಕಿಗೆ ಸಿಕ್ಕಾಪಟ್ಟೆ ಪೈಪೋಟಿ ಆರಂಭವಾಗಿದೆ.
ಭಾನುವಾರ ಈ ಬಿಡ್ಡಿಂಗ್ ಆರಂಭವಾಗಲಿದ್ದು, ಬಿಸಿಸಿಐ ಕ್ಲೋಸಿಂಗ್ ಡೇಟ್ ಅನ್ನು ಇನ್ನೂ ಅಂತಿಮ ಮಾಡಿಲ್ಲ. ಆದರೆ ಬಿಡ್ಡಿಂಗ್ ತೀವ್ರತೆಯ ಆಧಾರದಲ್ಲಿ ಬಿಸಿಸಿಐ ಬಿಡ್ ಕ್ಲೋಸ್ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಅಂದಹಾಗೆ 2023 ರಿಂದ 27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯುವ ರೇಸ್‌ನಿಂದ ಜೆಫ್ ಬೆಜೂಸ್ ಮಾಲಿಕತ್ವದ ಅಮೆಜಾನ್ ಸಂಸ್ಥೆ ಹೊರಗುಳಿದಿದೆ.
ಆದ್ರೂ ಬಿಸಿಸಿಐಗೆ ಸಾಕಷ್ಟು ಬಿಡ್ ದಾರರು ಸಿಕ್ಕಿದ್ದಾರೆ. ಲೆಕ್ಕಾಚಾರದ ಪ್ರಕಾರ ಈ ಬಿಡ್ ನಿಂದ ಬಿಸಿಸಿಐ ಸುಮಾರು 50 ರಿಂದ 70 ಸಾವಿರ ಕೋಟಿ ಹಣವನ್ನು ನಿರೀಕ್ಷೆ ಮಾಡುತ್ತಿದೆಯಂತೆ.
ಒಟ್ಟು 10 ಕಂಪನಿಗಳು ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆಯಲ್ಲಿ ರೇಸ್‌ನಲ್ಲಿ ಉಳಿದುಕೊಂಡಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈ ಹಿಂದೆ 2018ರಲ್ಲಿ ಸ್ಟಾರ್ ಇಂಡಿಯಾ 16,347.5 ಕೋಟಿ ರು.ಗೆ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದರ ಅವಧಿ 2022 ಐಪಿಎಲ್‌ನೊಂದಿಗೆ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಿದೆ.
ಇನ್ನು 2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯಲು 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರು. ಮೂಲಬೆಲೆ ನಿಗದಿ ಮಾಡಿದೆ.
ಇದರ ಪ್ರಕಾರ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ರುಪಾಯಿ, ಮತ್ತು ಪ್ರತಿ ಪಂದ್ಯದ ಡಿಜಿಟೆಲ್ ಹಕ್ಕು 33 ಕೋಟಿ ರುಪಾಯಿ ಇದೆ. ಟಿವಿ ಹಕ್ಕು ಮೂಲಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿಗೆ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದೆ.
ಡಿಜಿಟಲ್ ಹಕ್ಕು ಇನ್ನೂ ಹೆಚ್ಚಿಗೆ ಮೊತ್ತಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115ರಿಂದ 120 ಕೋಟಿ ರು. ಆಗಬಹುದು ಎನ್ನಲಾಗುತ್ತಿದೆ.