ಮುಂಬೈ: ಐಪಿಎಲ್ (IPL) 2025ಕ್ಕೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಮೆಗಾ ಹರಾಜಿಗೆ ಸಿದ್ಧತೆ ನಡೆಯುತ್ತಿದೆ. ಈ ವರ್ಷದ ಅಂತ್ಯದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ತಂಡಗಳು ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳ ಬಗ್ಗೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
ಬಿಸಿಸಿಐ ಐಪಿಎಲ್ ಮೆಗಾ ಹರಾಜಿನ ಮೊದಲು, ಐಪಿಎಲ್ ಫ್ರಾಂಚೈಸಿಗಳು ಐದು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಬಹುದು ಎನ್ನಲಾಗುತಿದೆ. ಈಗಾಗಲೇ ಹಲವು ತಂಡಗಳು ಐವರು ಆಟಗಾರರ ಪಟ್ಟಿ ಸಿದ್ಧಪಡಿಸಿಕೊಂಡಿವೆ ಎನ್ನಲಾಗುತ್ತಿದೆ.
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯರನ್ನು ಉಳಿಸಿಕೊಳ್ಳುವ ಇಂಗಿತದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಿಗೂ ಇದರಿಂದ ಲಾಭವಾಗಲಿದೆ ಎನ್ನಲಾಗುತ್ತಿದೆ.
ಐಪಿಎಲ್ ಮೆಗಾ ಹರಾಜು ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಹೀಗಾಗಿ ನಿಯಮಗಳು ಮತ್ತು ನಿಬಂಧನೆಗಳನ್ನು ಬೋರ್ಡ್ ಫಾರ್ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಸಿಐ) ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡುತ್ತದೆ. ಐಪಿಎಲ್ನ 10 ಫ್ರಾಂಚೈಸಿ ತಂಡಗಳ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿದೆ. ಸಭೆಯಲ್ಲಿ ಮೆಗಾ ಹರಾಜಿಗೂ ಮುನ್ನ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು 5 ಅಥವಾ 6ಕ್ಕೆ ಏರಿಸಬೇಕೆಂದು ಬೇಡಿಕೆ ಇಡಲಾಗಿದೆ. ಆದರೆ, ಬಿಸಿಸಿಐ ಮಾತ್ರ ತನ್ನ ನಿರ್ಧಾರ ಪ್ರಕಟಿಸಿಲ್ಲ.