ಚಿನ್ನಸ್ವಾಮಿ ಕ್ರೀಡಾಂಗಣ..ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಬೆಂಗಳೂರಿನ ಹೆಮ್ಮೆಯ ಪ್ರತೀಕ.. ಕರ್ನಾಟಕ ಕ್ರಿಕೆಟಿಗರ ಪ್ರೀತಿಯ ಮೈದಾನ. ಒಂದೇ ಒಂದು ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಆಡಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನÀ ಕನಸು.. ಅಂತಹ ಕ್ರೀಡಾಂಗಣಕ್ಕೆ ಈಗ ಕಾರ್ಮೋಡ ಆವರಿಸಿದೆ.
ಸರಿಯಾಗಿ ಎರಡು ದಶಕಗಳ ಹಿಂದೆ..ನಾನು ಕ್ರೀಡಾ ವರದಿಗಾರನಾಗಿ ಮೊದಲ ಬಾರಿ ಚಿನ್ನಸ್ವಾಮಿ ಮೈದಾನದೊಳಗೆ ಪ್ರವೇಶಿಸಿದ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ಆಗಿನ ಪಿಚ್ ಕ್ಯುರೇಟರ್ ನಾರಾಯಣರಾಜು ಪಿಚ್ ರೆಡಿ ಮಾಡಿಸ್ತಾ ಇದ್ರು. ಕ್ರಿಕೆಟ್ ಪಿಚ್ ಹೇಗೆ ರೆಡಿ ಮಾಡೋದು ಅನ್ನೋದರ ಬಗ್ಗೆ ಮಾಹಿತಿ ಪಡೆಯೋಣ ಅಂತ ನಾರಾಯಣ ರಾಜು ಬಳಿ ಹೋಗಿದ್ದೆ. ನಾರಾಯಣ ರಾಜು ಅವರು ಮೈದಾನದ ಮಧ್ಯದಲ್ಲಿ ನಿಂತು ಕೊಂಡಿದ್ದರು. ನಾನು ಸೀದಾ ಬೌಂಡರಿ ಲೈನ್‍ನಿಂದ ಹಸಿರು ಹುಲ್ಲಿನ ಅಂಗಣದ ಮೇಲೆ ನಡೆದಾಡುತ್ತಾ ಮೈದಾನದ ಮಧ್ಯ ಭಾಗ ತಲುಪಿದಾಗ ಒಂದು ಕ್ಷಣ ರೋಮಾಂಚನವಾಗಿತ್ತು. ಒಂದು ಕ್ಷಣ ಖಾಲಿ ಮೈದಾನವನ್ನು ದಿಟ್ಟಿಸಿನೋಡಿದಾಗ ಮೈಮನ ಪುಳಕಗೊಂಡಿತ್ತು. ಯಾಕಂದ್ರೆ ಚಿನ್ನಸ್ವಾಮಿ ಮೈದಾನ ಮಾತ್ರ ಅಲ್ಲ.. ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಗಳನ್ನು ಟಿವಿಯಲ್ಲಿ ನೊಡ್ತಾ ಇದ್ದ ನಾನು ಮೊದಲ ಬಾರಿ ಚಿನ್ನಸ್ವಾಮಿ ಮೈದಾನದ ಮಧ್ಯೆ ನಿಂತಿದ್ದೆ. ಆಗ ನನಗೆ ಅನ್ನಿಸಿದ್ದು.. ಕಿಕ್ಕಿರಿದು ಸೇರುವ ಪ್ರೇಕ್ಷಕರ ಭರಾಟೆಯಲ್ಲಿ ಆಡುವ ಕ್ರಿಕೆಟ್ ಆಟಗಾರರ ಖುಷಿ ಎಷ್ಟಿರಬಹುದು ಅಂತ..!
ಅದಿರಲಿ.. ಐದಾರು ತಿಂಗಳ ಹಿಂದೆ ನಡೆದ ಆ ಒಂದು ದೊಡ್ಡ ಅನಾಹುತಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಬಲಿಯಾಗುತ್ತಿದೆ. ರಾಜ್ಯ ಸರ್ಕಾರ, ಕೆಎಸ್‍ಸಿಎ ಮತ್ತು ಆರ್‍ಸಿಬಿ ಮ್ಯಾನೇಜ್‍ಮೆಂಟ್ ಮಾಡಿರುವ ಪ್ರಮಾದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಶಿಕ್ಷೆಯಾಗಿದೆ. ಹೀಗಾಗಿ ಕಳೆದ 4-5 ತಿಂಗಳಿಂದ ಚಿನ್ನಸ್ವಾಮಿ ಅಂಗಣದಲ್ಲಿ ಒಂದೇ ಒಂದು ನಡೆದಿಲ್ಲ.
ಹೌದು, ತಪ್ಪು ಎಲ್ಲಾ ಕಡೆಯಿಂದಲೂ ಆಗಿದೆ. ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಎಲ್ಲರಿಗೂ ಪಾಠವಾಗಿದೆ. ಅದರಲ್ಲೂ ಕ್ರಿಕೆಟ್ ಅಭಿಮಾನಿಗಳು ಎಚ್ಚೆತ್ತುಕೊಳ್ಳಬೇಕು. ಹುಚ್ಚು ಅಭಿಮಾನ ಜೀವಕ್ಕೆ ಅಪಾಯ ಎಂಬುದನ್ನು ಅರಿತುಕೊಳ್ಳಬೇಕು. ಹಾಗೇ ಕೆಎಸ್‍ಸಿಎ ಮತ್ತು ಆಯೋಜಕರು ಕೇವಲ ಕ್ರಿಕೆಟಿಗರಿಗೆ ಮಾತ್ರ ಭದ್ರತೆ ಕೊಡುವುದಲ್ಲ. ಸೇರಿರುವ ಪ್ರೇಕ್ಷಕರಿಗೂ ರಕ್ಷಣೆ ನೀಡಬೇಕು. ಇನ್ನು ಸರ್ಕಾರದ ಜನಪ್ರತಿನಿಧಿಗಳು, ಅಧಿಕಾರಿಗಳು ಮೈದಾನಕ್ಕೆ ಬಂದು ಪಂದ್ಯ ನೋಡಿ ಎಂಜಾಯ್ ಮಾಡುವುದಲ್ಲ. ಬದಲಾಗಿ ಅಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆಯೂ ಚಿತ್ತ ಹರಿಸಬೇಕು.
ನಿಜ, ಚಿನ್ನಸ್ವಾಮಿ ಕ್ರೀಡಾಂಗಣದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಈ ರೀತಿಯ ದುರ್ಘಟನೆ ನಡೆದಿದ್ದು. ಈ ಹಿಂದೆ ಕ್ರೀಡಾಂಗಣದ ಹೊರಭಾಗದಲ್ಲಿ ಬಾಂಬ್ ಬ್ಲ್ಯಾಸ್ಟ್ ಆದಾಗಲೂ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿರಲಿಲ್ಲ. ಹಾಗೇ ಕಾಲ್ತುಳಿದ ಪ್ರಕರಣಗಳು ಆಗುವುದು ಇದೇನೂ ಹೊಸತಲ್ಲ. ಅನೇಕ ಕಾರ್ಯಕ್ರಮಗಳಲ್ಲಿ, ಕೆಲವು ಮೈದಾನದಲ್ಲೂ ಈ ಹಿಂದೆ ಕಾಲ್ತುಳಿತ ಪ್ರಕರಣಗಳು ಆಗಿವೆ. ಹಾಗಂತ ಅಲ್ಲಿ ಈಗ ಪಂದ್ಯ ನಡೆಯುವುದಿಲ್ವಾ..? ಒಂದೇ ಒಂದು ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಯೋಜನೆ ಮಾಡಬಾರದು ಅನ್ನೋದು ಎಷ್ಟರ ಮಟ್ಟಿಗೆ ಸರಿ..?
ಈಗಾಗಲೇ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ವರದಿಯಲ್ಲಿ ಪೊಲೀಸ್ ಇಲಾಖೆ, ಡಿಎನ್‍ಎ ಸಂಸ್ಥೆ ಮತ್ತು ಕೆಎಸ್‍ಸಿಎ ತಪ್ಪಿತಸ್ಥರು ಎಂದು ಉಲ್ಲೇಖ ಮಾಡಿದೆ. ಅಲ್ಲದೆ, ದೊಡ್ಡ ಮಟ್ಟದ ಪಂದ್ಯಗಳನ್ನು ನಡೆಸುವುದು ಅಸುರಕ್ಷಿತ ಎಂದು ಹೇಳಿದೆ. ಸದ್ಯ ಕ್ರೀಡಾಂಗಣದ ಸಮಗ್ರ ರಚನಾತ್ಮಕ ಫಿಟ್‍ನೆಸ್ ಪರೀಕ್ಷೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ ಲೋಕೋಪಯೋಗಿ ಇಲಾಖೆ ಕೆಎಸ್‍ಸಿಎ ನೋಟಿಸ್ ಕೂಡ ನೀಡಿದೆ.
ಆದ್ರೆ ಕೆಎಸ್‍ಸಿಎನ ಈ ಹಿಂದಿನ ಆಡಳಿತ ಮಂಡಳಿಯು ಸರ್ಕಾರದ ಆದೇಶದ ಬಗ್ಗೆ ಮೌನ ವಹಿಸಿತ್ತು. ಇದರಿಂದ ಅಂತಾರಾಷ್ಟ್ರೀಯ ಪಂದ್ಯಗಳು ಚಿನ್ನಸ್ವಾಮಿ ಮೈದಾನಕ್ಕೆ ಕೈತಪ್ಪಿ ಹೋಗಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಮುಂದಿನ ಟಿ-20 ವಿಶ್ವಕಪ್ ಪಂದ್ಯಗಳು ಚಿನ್ನಸ್ವಾಮಿ ಅಂಗಣಕ್ಕೆ ಆತಿಥ್ಯ ವಹಿಸುವ ಅವಕಾಶ ಕೂಡ ಸಿಗಲಿಲ್ಲ.
ಈ ನಡುವೆ, ಮೊನ್ನೆ ಮೊನ್ನೆ ಕೆಎಸ್‍ಸಿಎ ಚುನಾವಣೆ ನಡೆದಿತ್ತು. ಆಗ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಯಿಂದ ಮತ್ತೆ ಮುನ್ನಲೆಗೆ ಬಂತು. ಅದೇ ರೀತಿ ಕೆಎಸ್‍ಸಿಎ ಹಾಲಿ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಟೀಮ್ ಕೂಡ ಚಿನ್ನಸ್ವಾಮಿಯಲ್ಲಿ ಐಪಿಎಲ್ ಸೇರಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುತ್ತೇವೆ ಎಂಬ ಭರವಸೆಯೊಂದಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುಕ್ಕಾಣಿ ಹಿಡಿದೆ. ಕೊಟ್ಟ ಮಾತಿನಂತೆ ವೆಂಕಿ ಟೀಮ್ ಈಗ ಸರ್ಕಾರದ ಜೊತೆ ಮಾತುಕತೆ ಕೂಡ ನಡೆಸುತ್ತಿದೆ. ಇದೇ ಕೆಲಸವನ್ನು ಈ ಹಿಂದಿನ ಆಡಳಿತ ಮಂಡಳಿ ಮಾಡುತ್ತಿದ್ರೆ ಈ ಸಮಸ್ಯೆ ಬಗೆಹರಿಸಬಹುದಿತ್ತು.
ಅಂದಹಾಗೇ, ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಐಸಿಸಿ, ಬಿಸಿಸಿಐ ಕಾಟಚಾರಕ್ಕೆ ಪಂದ್ಯಗಳನ್ನು ನಡೆಸುವುದಿಲ್ಲ. ಕ್ರೀಡಾಂಗಣದ ಪಿಚ್‍ನಿಂದ ಹಿಡಿದು ಎಲ್ಲವನ್ನೂ ಪರಿಶೀಲನೆ ಮಾಡಿಯೇ ಅನುಮತಿ ನೀಡುವುದು. ಐಸಿಸಿ ಮತ್ತು ಬಿಸಿಸಿಐನಲ್ಲಿ ಅದಕ್ಕಾಗಿಯೇ ವಿಶೇಷ ತಂಡವೂ ಇದೆ. ಅದು ಅಲ್ಲದೆ ಚಿನ್ನಸ್ವಾಮಿ ಹೈಟೆಕ್ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಸುಮಾರು 30ಸಾವಿರ ಪ್ರೇಕ್ಷಕರು ಪಂದ್ಯವನ್ನು ನೋಡಬಹುದು. ಮೇಲ್ನೋಟಕ್ಕೆ ಕ್ರೀಡಾಂಗಣದೊಳಗೆ ದೊಡ್ಡ ಸಮಸ್ಯೆ ಏನು ಇದ್ದಂತಿಲ್ಲ.
ಆದ್ರೂ ಕೆಲವೊಂದು ಸಮಸ್ಯೆಗಳು ಇವೆ.. ಮೊದಲನೆಯದಾಗಿ ಚಿನ್ನಸ್ವಾಮಿ ಮೈದಾನದ ನಗರದ ಹೃದಯಭಾಗದಲ್ಲಿದೆ. ಸುಸಜ್ಜಿತವಾದ ಪಾರ್ಕಿಂಗ್ ಸೌಲಭ್ಯಗಳಿಲ್ಲ. ಟ್ರಾಫಿಕ್ ಸಮಸ್ಯೆಯ ಜೊತೆಗೆ ಟಿಕೆಟ್ ಸಿಗಲಿ.. ಸಿಗದೇ ಇರಲಿ.. ಕಿಕ್ಕಿರಿದು ಸೇರುವ ಅಭಿಮಾನಿಗಳು. ಹಾಗೇ ಕ್ರೀಡಾಂಗಣದ ಸುತ್ತ ಹಾದು ಹೋಗುವ ಪ್ರಮುಖ ರಸ್ತೆಗಳು. ಹೀಗಾಗಿ ಒಂದು ಪಂದ್ಯ ಆಯೋಜನೆ ಮಾಡುವಾಗ ಸಿಕ್ಕಾಪಟ್ಟೆ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ. ಇದು ಕ್ರಿಕೆಟ್ ಅಭಿಮಾನಿಗಳನ್ನು ಬಿಟ್ಟು ಸಾರ್ವಜನಿಕರಿಗೆ ಕಿರಿಕಿರಿಯಾಗೋದು ಸಹಜವೇ.
ಇದೀಗ ಕೆಎಸ್‍ಸಿಎ ಹಾಗೂ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡಲೇಬೇಕು. ಹಾಗಂತ ಚಿನ್ನಸ್ವಾಮಿಯಲ್ಲಿ ಪಂದ್ಯವನ್ನು ಆಯೋಜನೆ ಮಾಡಲೇಬಾರದು ಅನ್ನೋದು ಕೂಡ ಸರಿಯಲ್ಲ. ಹಾಗೇ ಇಲ್ಲಿಯೆ ಮಾಡಬೇಕು ಅನ್ನೋ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಯಾಕಂದ್ರೆ ಬೆಂಗಳೂರು ಈಗ ಹಳೆಯ ಬೆಂಗಳೂರು ಅಲ್ಲ. ಗ್ರೇಟರ್ ಬೆಂಗಳೂರು ಆಗಿದೆ. ಅಂದ ಮೇಲೆ ನಗರದ ಹೊರಭಾಗದಲ್ಲಿ ದೊಡ್ಡ ಕ್ರೀಡಾಂಗಣವನ್ನು ನಿರ್ಮಾಣ ಮಾಡಬೇಕು. ಈಗಾಗಲೆ ನೆಲಮಂಗಲದ ಆಲೂರಿನಲ್ಲಿ ಕೆಎಸ್‍ಸಿಎ ಮೈದಾನವಿದೆ. ಅಲ್ಲಿ ಪಂದ್ಯ ಆಯೋಜನೆ ಮಾಡಿದ್ರೂ ಮತ್ತೆ ಟ್ರಾಫಿಕ್ ಸಮಸ್ಯೆ ಒಂದು ಕಡೆಯಾದ್ರೆ, ಹೈಟೆಕ್ ಸೌಲಭ್ಯಗಳ ಕೊರತೆಯೂ ಇದೆ.
ಇನ್ನೊಂದು ವಿಷ್ಯ, ಆರ್‍ಸಿಬಿ ತಂಡಕ್ಕೆ ಬೆಂಗಳೂರಿನಲ್ಲೇ ಪಂದ್ಯ ನಡೆಸಬೇಕು ಅಂತೆನಿಲ್ಲ. ಆರ್‍ಸಿಬಿಗೆ ಬೆಂಗಳೂರು ಅನ್ನೋದು ಬ್ರ್ಯಾಂಡ್ ಅಷ್ಟೇ.. ಚಿನ್ನಸ್ವಾಮಿ ಅಂಗಣಕ್ಕೆ ದುಡ್ಡು ಕೊಟ್ಟು ಆಡ್ತಾರೆ. ಅಷ್ಟೇ ಅಲ್ಲ, ಬೇರೆ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು ಆರ್‍ಸಿಬಿ ತಂಡದ ಪಂದ್ಯಕ್ಕೆ ಆತಿಥ್ಯ ವಹಿಸಲು ಮುಂದೆ ಬಂದಿವೆ. ಹೀಗಾಗಿ ಐಪಿಎಲ್ ಪಂದ್ಯ ಕೈತಪ್ಪಿದ್ರೆ ಬೆಂಗಳೂರಿಗೆ ನಷ್ಟ.. ಕೆಎಸ್‍ಸಿಎಗೆ ನಷ್ಟ ಅಷ್ಟೇ. ಒಂದು ಐಪಿಎಲ್ ಟೂರ್ನಿಯಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ
ಒಟ್ಟಿನಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ ಈಗ ಅಳಿಸಲಾಗದ ಒಂದು ಕಪ್ಪು ಚುಕ್ಕೆ ಅಂಟಿಕೊಂಡಿದೆ. ರಾಜ್ಯ ಕ್ರಿಕೆಟಿಗರ ಹಾರ್ಟ್ ಬೀಟ್‍ನಂತಿರುವ ಚಿನ್ನಸ್ವಾಮಿ ಅಂಗಣದ ಭವಿಷ್ಯ ನಮ್ಮ ಸಂವಿಧಾನ ವ್ಯವಸ್ಥೆಯ ಕೈಯಲ್ಲಿದೆ. ನೋಡೋಣ ಏನಾಗುತ್ತೆ ಅಂತ..!
ಸನತ್ ರೈ








