ಐಪಿಎಲ್ ಟೂರ್ನಿಗೆ ಇನ್ನೊಂದು ವಾರದಲ್ಲಿ ಮುಹೂರ್ತ ಫಿಕ್ಸ್ – ಬ್ರಿಜೇಶ್ ಪಟೇಲ್
ಐ
ಸಿಸಿ 2020ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಿದೆ. ಹೀಗಾಗಿ ಬಿಸಿಸಿಐಗೆ ವರದಾನವಾಗಿದೆ. ಅಷ್ಟೇ ಅಲ್ಲ, 2020ರ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಯುಎಇನಲ್ಲಿ ಸೆಪ್ಟಂಬರ್ 26ರಿಂದ ನವೆಂಬರ್ 8ರವರೆಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಆದ್ರೆ ಇದಕ್ಕೆ ಭಾರತ ಸರ್ಕಾರದ ಅನುಮತಿಯೂ ಬೇಕಾಗಿದೆ.
ಈ ನಡುವೆ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಾತನಾಡಿದ್ದಾರೆ. ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಈ ವಾರ ಅಥವಾ ಮುಂದಿನ ಹತ್ತು ದಿನದೊಳಗೆ ಸಭೆ ನಡೆಸಲಿದೆ. ಆ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಐಪಿಎಲ್ ಸಿದ್ಧತೆ, ಅಂತಿಮ ವೇಳಾಪಟ್ಟಿ ಸೇರಿದಂತೆ ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಹಾಗೇ 13ನೇ ಆವೃತ್ತಿಯ ಐಪಿಎಲ್ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ 60 ಪಂದ್ಯಗಳು ನಡೆಯಲಿವೆ. ಬಹುಶಃ ಯುಎಇನಲ್ಲಿ ಈ ಬಾರಿಯ ಐಪಿಎಲ್ ನಡೆಯುವುದು ಬಹುತೇಕ ಖಚಿತವಾಗಿದೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್‍ಗೆ ಪ್ರೇಕ್ಷಕರಿಲ್ಲ. ಜೈವಿಕ ಸುರಕ್ಷತೆಯೊಂದಿಗೆ ಈ ಬಾರಿಯ ಪಂದ್ಯಗಳು ನಡೆಯಲಿವೆ. ಪಂದ್ಯಗಳನ್ನು ಕ್ರಿಕೆಟ್ ಅಭಿಮಾನಿಗಳು ಟಿವಿಯಲ್ಲೇ ನೋಡಬೇಕಾಗುತ್ತದೆ. ಐಪಿಎಲ್ ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿವೆ. ತಂಡಗಳ ವಿದೇಶಿ ಆಟಗಾರರು ನೇರವಾಗಿ ಯುಎಇಗೆ ಆಗಮಿಸಲಿದ್ದಾರೆ. ಅಲ್ಲಿ ಕೋವಿಡ್-19 ಮಾರ್ಗಸೂಚಿಗಳ ಪ್ರಕಾರವೇ ಫ್ರಾಂಚೈಸಿಗಳ ತರಬೇತಿ ಶಿಬಿರ ನಡೆಯಲಿದೆ.
ನಮ್ಮ ತಂಡಗಳ ಆಟಗಾರರಿಗೆ ಕನಿಷ್ಠ ಮೂರರಿಂದ ನಾಲ್ಕು ವಾರಗಳ ಅಭ್ಯಾಸ ಶಿಬಿರ ಬೇಕಾಗುತ್ತದೆ. ಅದಕ್ಕಿಂತ ಜಾಸ್ತಿ ಏನು ಬೇಡ. ಬಿಸಿಸಿಐ ಮತ್ತು ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಿದ ನಂತರ ನಮ್ಮ ಯೋಜನೆಗಳಿಗೆ ಅಂತಿಮ ರೂಪ ಸಿಗುತ್ತದೆ ಎಂದು ಫ್ರಾಂಚೈಸಿ ಮಾಲೀಕರು ಹೇಳಿದ್ದಾರೆ.
ಇದೇ ವೇಳೆ ಐಪಿಎಲ್ ಮುಗಿದ ತಕ್ಷಣವೇ ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ ನಲ್ಲಿ ಟೆಸ್ಟ್ ಸರಣಿ ಶುರುವಾಗಲಿದೆ. ಈ ನಡುವೆ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿರುವ ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ಐಪಿಎಲ್ ನಲ್ಲಿ ಆಡುತ್ತಿಲ್ಲ. ಇವರು ಮೊಟೇರಾ ಅಂಗಣದಲ್ಲಿ ತರಬೇತಿ ನಡೆಸುವ ಸಾಧ್ಯತೆ ಇದೆ.








