ಎಲಿಮಿನೇಟರ್ ಹೋರಾಟಕ್ಕೆ ಸಜ್ಜಾಗುತ್ತಿದೆ ರಾಯಲ್ ಚಾಲೆಂಜರ್ಸ್ – ಈ ಸಲ ಕಪ್ ಯಾರದ್ದು..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಎಲಿಮಿನೇಟರ್ ಹೋರಾಟಕ್ಕೆ ಸಜ್ಜಾಗುತ್ತಿದೆ. ಲೀಗ್ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಷ್ಟೇ ಪಂದ್ಯ ಗೆದ್ದಿದ್ದರೂ ನೆಟ್ ರನ್ ರೇಟ್ನಲ್ಲಿ ಹಿಂದೆ ಬಿದ್ದ ಕಾರಣ ಆರ್ಸಿಬಿ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿದೆ. ಆರ್ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ೭ ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪಂದ್ಯ ಗೆದ್ದ ಆರ್ಸಿಬಿಗೆ ಇದು ಮೈಲುಗಲ್ಲಿನ ಪಂದ್ಯವೂ ಹೌದು. ಡೆಲ್ಲಿ ವಿರುದ್ಧದ ಜಯದೊಂದಿಗೆ ಐಪಿಎಲ್ನಲ್ಲಿ ೧೦೦ನೇ ಗೆಲುವಿನ ಮೈಲಿಗಲ್ಲನ್ನು ಆರ್ಸಿಬಿ ಸ್ಥಾಪಿಸಿದೆ.
ಈ ಮೂಲಕ ಐಪಿಎಲ್ನಲ್ಲಿ ೧೦೦ ಗೆಲುವುಗಳ ಮೈಲಿಗಲ್ಲು ಸ್ಥಾಪಿಸಿದ ನಾಲ್ಕನೇ ತಂಡ ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಒಟ್ಟಾರೆಯಾಗಿ 210 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 100 ಗೆಲುವುಗಳ ಸಾಧನೆ ಮಾಡಿದೆ. ಕಳೆದ 14 ಸೀಸನ್ಗಳಲ್ಲೂ ಆರ್ಸಿಬಿ ಐಪಿಎಲ್ನಲ್ಲಿ ಆಡುತ್ತಿದೆ. 3 ಬಾರಿ ಫೈನಲ್ ತಲುಪಿದರೂ ಇಲ್ಲಿ ತನಕ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಡೆಲ್ಲಿ, ಪಂಜಾಬ್ ಮತ್ತು ಆರ್ಸಿಬಿ ತಂಡಗಳು ಇಲ್ಲಿ ತನಕ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಆಗಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಕಪ್ ಗೆದ್ದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ 2 ಬಾರಿ ಚಾಂಪಿಯನ್ ಆಗಿದೆ. ರಾಜಸ್ಥಾನ ರಾಯಲ್ಸ್ ಮೊದಲ ಆವೃತ್ತಿಯಲ್ಲೇ ಕಪ್ ಗೆದ್ದು ಇತಿಹಾಸ ಬರೆದಿತ್ತು. ಡೆಕ್ಕನ್ ಚಾರ್ಜರ್ಸ್ ಮತ್ತು ಸನ್ರೈಸರ್ಸ್ ಹೈದ್ರಾಬಾದ್ ಉಳಿದ 2 ವರ್ಷ ಕಪ್ ಗೆದ್ದಿವೆ.
ಈ ಮೊದಲು ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ನೂರು ಗೆಲುವುಗಳ ಗಡಿ ದಾಟಿವೆ. ಮುಂಬೈ ತಂಡ ಇಲ್ಲೀವರೆಗೂ ೧೨೭ ಪಂದ್ಯಗಳನ್ನ ಗೆದ್ದಿದ್ರೆ, ಚೆನ್ನೈ ೧೧೫ ಹಾಗೆ ಕೆಕೆಆರ್ ತಂಡ ೧೦೫ ಜಯವನ್ನ ದಾಖಲಿಸಿದೆ.








