ಐಪಿಎಲ್ ನಲ್ಲಿ ವಿರಾಟ್ ಕ್ಯಾಪ್ಟನ್ಸಿ ಆರ್ ಸಿಬಿಗೆ ಪ್ಲಸ್ಸೋ.. ಮೈನಸ್ಸೋ..?
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಂಗ್ಲೆಂಡ್ ನಾಡಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಗೆದ್ದಿದೆ. ಏಕದಿನ ಮತ್ತು ಟಿ20 ಸರಣಿಯನ್ನೂ ವಿರಾಟ್ ನಾಯಕತ್ವದಲ್ಲಿ ಗೆದ್ದಿದೆ.
ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ.. ಹೀಗೆ ಜಗತ್ತಿನ ಎಲ್ಲಾ ಕಡೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸಾರಥಿಯಾಗಿ ಯಶ ಸಾಧಿಸಿದ್ದಾರೆ.
ಆದರೆ ಐಪಿಎಲ್ ನಾಯಕತ್ವಕ್ಕೆ ಬಂದಾಗಿ ವಿರಾಟ್ ಡಲ್ ಆಗಿ ಕಾಣುತ್ತಾರೆ. ಯಾಕಂದರೆ ಕಳೆದ 14 ವರ್ಷಗಳಿಂದ ವಿರಾಟ್ ಆರ್ ಸಿಬಿ ತಂಡದಲ್ಲಿದ್ದರೂ ರಾಯಲ್ ಚಾಲೆಂಜರ್ಸ್ ಕಪ್ ಗೆದ್ದಿಲ್ಲ.
ಅಂದಹಾಗೇ, ಆರ್ ಸಿಬಿ 3 ಬಾರಿ ಫೈನಲ್ ತಲುಪಿದೆ. ಮೊದಲಿಗೆ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಮುಗ್ಗರಿಸಿದರೆ, 2ನೇ ಬಾರಿ ಸಿಎಸ್ ಕೆ ವಿರುದ್ಧ ಮಂಡಿಯೂರಿತ್ತು.
3ನೇ ಬಾರಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋಲುಕಂಡಿತ್ತು. ಮೊದಲ ಫೈನಲ್ ವೇಳೆ ವಿರಾಟ್ ನಾಯಕನಾಗಿರಲಿಲ್ಲ. ಅನಿಲ್ ಕುಂಬ್ಳೆ ಆರ್ ಸಿಬಿ ಸಾರಥಿಯಾಗಿದ್ದರು.
2ನೇ ಬಾರಿ ಫೈನಲ್ ನಲ್ಲಿ ಸೋತಿದ್ದಾಗ ಡೇನಿಯಲ್ ವೆಟ್ಟೋರಿ ಕ್ಯಾಪ್ಟನ್ ಆಗಿದ್ದರು. ಮೂರನೇ ಬಾರಿ ಆರ್ ಸಿಬಿ ಫೈನಲ್ ಮ್ಯಾಚ್ ಆಡಿದ್ದಾಗ ವಿರಾಟ್ ನಾಯಕನಾಗಿದ್ದರೂ ಕಪ್ ಗೆದ್ದಿರಲಿಲ್ಲ.
ಆರ್ಸಿಬಿ 13 ಸೀಸನ್ಗಳು ಕಳೆದರು ತಮ್ಮ ಮೊದಲ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿದೆ. ಜೊತೆಗೆ ದೀರ್ಘಕಾಲದವರೆಗೆ ತಂಡದ ನಾಯಕತ್ವ ವಹಿಸಿರುವ ವಿರಾಟ್ ಕೊಹ್ಲಿಯ ನಾಯಕತ್ವ ನಿರಂತರ ಪ್ರಶ್ನೆಯಲ್ಲಿದೆ.
ಇನ್ನೊಂದು ಕಡೆಯಲ್ಲಿ ವಿರಾಟ್ ಕ್ಯಾಪ್ಟನ್ಸಿಗೆ ಚೋಕರ್ಸ್ ಪಟ್ಟವೂ ಇದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲು, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೋಲು, ಐಪಿಎಲ್ ಫೈನಲ್ ಸೋಲು, ಇದಲ್ಲದೆ ಹಲವು ಬಾರಿ ತಂಡ ಗೆಲ್ಲಬೇಕಾಗಿ ಬಂದಾಗ ಸೋತಿದ್ದು ವಿರಾಟ್ ಕ್ಯಾಪ್ಟನ್ಸಿಗೆ ಚೋಕರ್ಸ್ ಪಟ್ಟ ತಂದಿದೆ. ಒಟ್ಟಿನಲ್ಲಿ ಅದೇನೇ ಇರಲಿ ವಿರಾಟ್ ಆಟಗಾರನಾಗಿ ಅದ್ಭುತ ಸಾಧನೆ ಮಾಡಿದ್ದಾರೆ. ಕ್ಯಾಪ್ಟನ್ ಆಗಿ ಪ್ರಶ್ನೆಗೆ ಇನ್ನೂ ಉತ್ತರ ಕೊಟ್ಟಿಲ್ಲ.









