ಪಂಜಾಬ್ ವಿರುದ್ಧ ಸೋಲಿಗೆ ಆ ಓವರ್ ಕಾರಣ ಎಂದ ವಿರಾಟ್
ಅಹಮದಾಬಾದ್ : ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲುಂಡಿದೆ. ಟೂರ್ನಿಯ ಮೊದಲ ನಾಲ್ಕು ಪಂದ್ಯಗಳನ್ನ ಗೆದ್ದು ಆತ್ಮವಿಶ್ವಾಸದಲ್ಲಿದ್ದ ಆರ್ ಸಿಬಿ ಈಗ ಸೋಲಿನ ರುಚಿ ಕಾಣುತ್ತಿದೆ.
ಇದು ಸಾಮಾನ್ಯವಾಗಿಯೇ ತಂಡದ ಮೇಲೆ ಪರಿಣಾಮ ಬೀರುತ್ತಿದ್ದು, ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮಾತನಾಡುತ್ತಾ, ಪಂಜಾಬ್ ಕಿಂಗ್ಸ್ ವಿರುದ್ಧ ನಮ್ಮ ಬೌಲರ್ ಗಳು ಕೆಟ್ಟ ಎಸೆತಗಳ ಮೂಲಕ ಬೌಂಡರಿಗಳನ್ನು ಬಿಟ್ಟುಕೊಟ್ಟರು.
ಕೊನೆಯ ಓವರ್ ಗಳಲ್ಲಿ ಅನಗತ್ಯವಾಗಿ 25 ರನ್ ಹೆಚ್ಚಿಗೆ ನೀಡಿದ್ದು ತಂಡಕ್ಕೆ ಹಿನ್ನಡೆ ಉಂಟಾಗಲು ಕಾರಣ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಸೋಲಿನ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ನಾವು ಒಂದು ಹಂತದಲ್ಲಿ 116ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ತಂಡವನ್ನು 160ರೊಳಗೆ ಕಟ್ಟಿಹಾಕಬಹುದಿತ್ತು.
ಆದರೆ ನಮ್ಮ ಯೋಜನೆಗಳು ಫಲಪ್ರದವಾಗಲಿಲ್ಲ. ಅಂತಿಮ ಓವರ್ ಗಳಲ್ಲಿ ಹರ್ಷಲ್ ಹಾಗೂ ಜೆಮಿಸನ್ ದುಬಾರಿಯದದ್ದು ತಂಡಕ್ಕೆ ಹೊರೆಯಾಯಿತು ಎಂದು ಬೇಸರ ಹೊರಹಾಕಿದರು.
ಇನ್ನು ಪಂದ್ಯ ಗೆಲ್ಲಲು ಚೇಸಿಂಗ್ ನ ಆರಂಭದಲ್ಲೇ ಆಕ್ರಮಣಕಾರಿ ಆಟದ ಅಗತ್ಯವಿತ್ತು. ಆದರೆ ಸುಲಭವಾಗಿ ರನ್ ಗಳಿಸಲು ಸಾಧ್ಯವಿರಲಿಲ್ಲ. ಕೆಲವೊಂದು ಸಂಗತಿಗಳಲ್ಲಿ ಸುಧಾರಣೆ ಕಾಣಬೇಕಿದೆ.
ರಜತ್ ಪಟೇದಾರ್ ಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರೊಬ್ಬ ಉತ್ತಮ ಆಟಗಾರ. ಆದರೆ ಈದಿನ ಅವರದ್ದಾಗಿರಲಿಲ್ಲ ಎಂದು ಬ್ಯಾಟಿಂಗ್ ಬಗ್ಗೆ ಮಾತನಾಡಿದರು.










