ವಿಶಾಖಪಟ್ಟಣಂ: ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಗಳು ಸರಾಗವಾಗಿ ನಡೆಯುತ್ತಿವೆ. ಬ್ಯಾಟರ್ ಗಳ ಅಬ್ಬರ ಪಂದ್ಯದಿಂದ ಪಂದ್ಯಕ್ಕೆ ಹೆಚ್ಚು ಜೋಶ್ ಪಡೆಯುತ್ತಿವೆ. ಈ ಮಧ್ಯೆ ಟೂರ್ನಿಯ ವೀಕ್ಷಣೆ ದಾಖಲೆ ಬರೆದಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ 17ನೇ ಆವೃತ್ತಿ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ.
ಲೀಗ್ ಸುತ್ತಿನ ಮೊದಲ 10 ಪಂದ್ಯಗಳಲ್ಲಿ ದಾಖಲೆಯ 35 ಕೋಟಿ ವೀಕ್ಷಣೆ ಕಂಡಿದೆ. ಕೋವಿಡ್ ನಂತರ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಐಪಿಎಲ್ ಟೂರ್ನಿಯ ಮೊದಲ 10 ಪಂದ್ಯಗಳನ್ನು 35 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ.
ಈ ಕುರಿತು ಸ್ವತಃ ಸ್ಟಾರ್ ಸ್ಫೋರ್ಟ್ಸ್ ತಿಳಿಸಿದೆ. ಅಲ್ಲದೇ ಟಿವಿಯಲ್ಲಿ ಪಂದ್ಯಾವಳಿಯ ಒಟ್ಟು ವೀಕ್ಷಣೆ ಸಮಯವು 8,028 ಕೋಟಿ ನಿಮಿಷ ತಲುಪಿದೆ. ಇದು ಕಳೆದ ವರ್ಷಕ್ಕಿಂತ ಶೇ. 20ರಷ್ಟು ಹೆಚ್ಚಾಗಿದೆ. ಹಿಂದಿನ ಎಲ್ಲ ಆವೃತ್ತಿಗಳನ್ನೂ ಹೋಲಿಸಿದರೆ, 17ನೇ ಆವೃತ್ತಿಯ ಐಪಿಎಲ್ ಪಂದ್ಯದ ರೇಟಿಂಗ್ ಶೇ. 22ರಷ್ಟು ಏರಿಕೆಯಾಗಿದೆ. ಚೆನ್ನೈ ಹಾಗೂ ಬೆಂಗಳೂರು ಮಧ್ಯೆ ನಡೆದ ಉದ್ಘಾಟನಾ ಪಂದ್ಯವನ್ನು ಸುಮಾರು 16.8 ಕೋಟಿ ಜನ ವೀಕ್ಷಿಸಿದ್ದರು. 6 ಪಂದ್ಯಗಳನ್ನು ಜಿಯೋ ಸಿನಿಮಾದ ಆಪ್ ನಲ್ಲಿ 20 ಕೋಟಿ ಜನ ವೀಕ್ಷಿಸಿದ್ದಾರೆ.