ರಾಹುಲ್, ನಾಮ್ ತೋ ಸುನಾ ಹೋಗಾ… ತ್ರಿಪಾಠಿಗೆ ಶಾರೂಕ್ ಗುಣಗಾನ..!
ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ರನ್ ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ತಲೆಬಾಗಿತ್ತು.
ಹಾಗೇ ನೋಡಿದ್ರೆ ಸಿಎಸ್ಕೆ ತಂಡಕ್ಕೆ ಗೆಲ್ಲುವ ಅವಕಾಶಗಳು ಜಾಸ್ತಿ ಇದ್ದವು. ಆದ್ರೆ ಸಿಎಸ್ ಕೆ ತಂಡದ ಲೆಕ್ಕಚಾರಗಳನ್ನು ಬುಡ ಮೇಲು ಮಾಡಿದ್ದು ರಾಹುಲ್ ತ್ರಿಪಾಠಿ.
ಆಲ್ ರೌಂಡರ್ ಆಗಿರುವ ರಾಹುಲ್ ತ್ರಿಪಾಠಿ ಅವರು ಆರಂಭಿಕನಾಗಿ ಕಣಕ್ಕಿಳಿದಿದ್ದರು. ಒಂದು ಕಡೆ ಕೆಕೆಆರ್ ತಂಡದ ವಿಕೆಟ್ ಗಳು ಉರುಳುತ್ತಿದ್ರೂ ಎದೆಗುಂದದ ರಾಹುಲ್ ತ್ರಿಪಾಠಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
51 ಎಸೆತಗಳಲ್ಲಿ 81 ರನ್ ದಾಖಲಿಸಿದ್ದ ರಾಹುಲ್ ತ್ರಿಪಾಠಿ ಅವರಿಗೆ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂದಿತ್ತು.
ರಾಹುಲ್ ತ್ರಿಪಾಠಿ ಆಟಕ್ಕೆ ಮನಸೋತಿರುವ ಕೆಕೆಆರ್ ಮಾಲೀಕ ಶಾರೂಕ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ರಾಹುಲ್ ತ್ರಿಪಾಠಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯಲು ಹೋದಾಗ ಶಾರೂಕ್ ಖಾನ್ ಗ್ಯಾಲರಿಯಿಂದ ರಾಹುಲ್, ನಾಮ್ ತೋ ಸುನಾ ಹೋಗಾ ಅನ್ನೋ ಡೈಲಾಗ್ ಹೇಳಿದ್ದರು.
ಅಂದ ಹಾಗೇ ರಾಹುಲ್ ನಾಮ್ ತೋ ಸುನಾ ಹೋಗಾ ಅನ್ನೋದು ಶಾರೂಕ್ ಅವರ ನೆಚ್ಚಿನ ಡೈಲಾಗ್. 1997ರಲ್ಲಿ ತೆರೆಕಂಡ ದಿಲ್ ತೋ ಪಾಗಲ್ ಹೈ ಸಿನಿಮಾದಲ್ಲಿ ಶಾರೂಕ್ ಇದೇ ಡೈಲಾಗ್ ಹೇಳಿದ್ದರು.
ಅಷ್ಟೇ ಅಲ್ಲ, ರಾಹುಲ್ ಅನ್ನೋ ಹೆಸರು ಶಾರೂಕ್ ಖಾನ್ ಅವರಿಗೆ ಅದೃಷ್ಟದ ಹೆಸರು ಕೂಡ ಹೌದು. ಶಾರೂಕ್ ಸುಮಾರು 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಹುಲ್ ಅನ್ನೋ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಹಾಗೇ ರಾಹುಲ್ ಅನ್ನೋ ಹೆಸರಿನ ಪಾತ್ರದಲ್ಲಿ ನಟಿಸಿದ್ದ ಬಹುತೇಕ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ. ಹೀಗಾಗಿ ರಾಹುಲ್ ನಾಮ್ ತೋ ಸುನಾ ಹೋಗಾ ಅಂತ ಹೇಳುವ ಮೂಲಕ ಶಾರೂಕ್ ಖಾನ್ ರಾಹುಲ್ ತ್ರಿಪಾಠಿಯ ಬ್ಯಾಟಿಂಗ್ ವೈಖರಿಗೆ ಶಹಬ್ಬಾಷ್ ಗಿರಿ ಕೊಟ್ಟಿದ್ದಾರೆ.
ಇನ್ನು ಶಾರೂಕ್ ಖಾನ್ ಹೇಳಿಕೆಯನ್ನೇ ಕೆಕೆಆರ್ ಟೀಮ್ ತನ್ನ ಟ್ವಿಟರ್ ಖಾತೆಯಲ್ಲೂ ಬರೆದುಕೊಂಡಿದೆ.
ರಾಹುಲ್ ತ್ರಿಪಾಠಿ ಅವರು ಹೊಡಿಬಡಿ ಆಟಗಾರ. ಇದೀಗ ಸಿಕ್ಕ ಮೊದಲ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ.
ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯ ಪ್ರದರ್ಶನವನ್ನು ನೀಡುವ ಜವಾಬ್ದಾರಿ ರಾಹುಲ್ ತ್ರಿಪಾಠಿ ಮೇಲಿದೆ.








