ಜಂಪಾ ಜಾದೂ ; ಆರ್ ಸಿ ಬಿ ಖುಷ್
ಯುಎಇನಲ್ಲಿ ಕಲರ್ ಫುಲ್ ಟೂರ್ನಿ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆರ್ ಸಿಬಿ ಸೇರಿದಂತೆ ಎಲ್ಲ ತಂಡಗಳು ಮೈದಾನಕ್ಕಿಳಿದು ತಾಲೀಮು ಆರಂಭಿಸಿವೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭವಾಗಲಿದ್ದು, ಈಗಾಗಲೇ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿವೆ. ಇದರ ಮಧ್ಯೆ ಆರ್ ಸಿಬಿ ತಂಡದ ಸ್ಪಿನ್ನರ್ ಆಡಂ ಜಂಪಾ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4ವಿಕೆಟ್ ಪಡೆದು ಜಾದೂ ಮಾಡಿದ್ದಾರೆ. 10ಓವರ್ ಗಳಲ್ಲಿ 55ರನ್ ನೀಡಿದ ಜಂಪಾ 4ವಿಕೆಟ್ ಪಡೆದ್ರು. ಜಂಪಾ ಸ್ಪಿನ್ ಜಾದೂಗೆ ಆರ್ ಸಿಬಿ ಫ್ರಾಂಚೈಸಿ ಫುಲ್ ಖುಷ್ ಆಗಿದೆ.
ಡೆಲ್ಲಿ ಕ್ಯಾಪಿಟಲ್ ತಂಡ ಗೆಲ್ಲಲಿದೆ
13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಐಪಿಎಲ್ ಟ್ರೋಫಿಯನ್ನು ಡೆಲ್ಲಿ ಕ್ಯಾಪಿಟಲ್ ತಂಡ ಗೆಲ್ಲಲಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕೆವಿನ್ ಪೀಟರ್ಸನ್, ಇಂಗ್ಲೆಂಡ್ ಬಬಲ್ ನಿಂದ ದುಬೈಗೆ … ನಾವು ಮತ್ತೆ ಕ್ರಿಕೆಟ್ ಗೆ ಮರಳಿರುವುದಕ್ಕೆ ಸಂತೋಷವಾಗುತ್ತಿದೆ. ಐಪಿಎಲ್ 2020ಯಲ್ಲಿ ಕೆಲಸ ಮಾಡುವುದಕ್ಕೆ ಅತ್ಯಂತ ಖುಷಿಪಡುತ್ತೇನೆ ಎಂದಿರುವ ಅವರು ಈ ಬಾರಿ ಯಾರು ಗೆಲ್ಲುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಹಾಗೆ ನನಗೆ ಡೆಲ್ಲಿ ಕ್ಯಾಪಿಟಲ್ ಗೆಲ್ಲುವ ವಿಶ್ವಾಸವಿದೆ ಎಂದು ಬರೆದುಕೊಂಡಿದ್ದಾರೆ.
‘ಒಸಾಕಾ’ ಚಾಂಪಿಯನ್
ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಜಪಾನ್ ನ ನವೊಮಿ ಒಸಾಕಾ ಅವರು ವಿಕ್ಟೋರಿಯಾ ಅಝರೆಂಕಾ ಅವರನ್ನು ಮಣಿಸಿ, ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಆರ್ಥರ್ ಆಶೆ ಕ್ರೀಡಾಂಗಣದಲ್ಲಿ 1 ಗಂಟೆ 53 ನಿಮಿಷ ನಡೆದ ಹೋರಾಟದಲ್ಲಿ 1-6, 6-3, 6-3 ಸೆಟ್ಗಳಿಂದ ವಿಕ್ಟೋರಿಯಾ ಅಜರೆಂಕಾ ಅವರನ್ನು ನಾಲ್ಕನೇ ಶ್ರೇಯಾಂಕಿತ ಒಸಾಕಾ ಸೋಲಿಸಿದ್ದಾರೆ.
ಹಿಂದೆ ಸರಿದ ಸೆರೆನಾ
ಯುಎಸ್ ಓಪನ್ ಸೆಮಿಫೈನಲ್ ನಲ್ಲಿ ಅಜರೆಂಕಾ ವಿರುದ್ಧ ಸೋಲುಂಡ ಸೆರೆನಾ ವಿಲಿಯಮ್ಸ್ ಹಿಂಗಾಲು ಗಾಯದ ಸಮಸ್ಯೆಯಿಂದಾಗಿ ಮುಂಬರುವ ಇಟಾಲಿಯನ್ ಓಪನ್ ನಿಂದ ಹಿಂದೆ ಸರಿದಿದ್ದಾರೆ. ಸೆರೆನಾ ವಿಲಿಯಮ್ಸ್ ಅವರಿಗೆ ಹಿಂಗಾಲು ಗಾಯದ ಸಮಸ್ಯೆ ತೀವ್ರವಾಗಿ ಕಾಡುತ್ತಿರುವ ಕಾರಣ ಅವರು ಸೋಮವಾರದಿಂದ ಆರಂಭವಾಗುತ್ತಿರುವ ಇಟಾಲಿಯನ್ ಓಪನ್ ನಿಂದ ಹಿಂದೆ ಸರಿದಿದ್ದಾರೆ ಎಂದು ಇಟಾಲಿಯನ್ ಓಪನ್ ಸಂಘಟಕರು ತಿಳಿಸಿದ್ದಾರೆ.
ಎಲ್ ಪಿಎಲ್ ಹರಾಜಿನಲ್ಲಿ ಮುನಾಫ್
ಐಪಿಎಲ್ ಮಾದರಿಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಶ್ರೀಲಂಕಾ ಪ್ರೀಮಿಯರ್ ಲೀಗ್ (ಎಲ್ ಪಿಎಲ್) ಆರಂಭಿಸುತ್ತಿದೆ. ಇದಕ್ಕಾಗಿ ವಿದೇಶದ ಆಟಗಾರರು ಸೇರಿ 5 ತಂಡಗಳು ಸುಮಾರು 150 ಆಟಗಾರರಿಗಾಗಿ ಹರಾಜು ನಡೆಸಲಿದೆ. ಈ ವಿದೇಶಿ ಆಟಗಾರರ ಪಟ್ಟಿಯಲ್ಲಿ ಈಗಾಗಲೇ ನಿವೃತ್ತಿಯಾಗಿರುವ ಭಾರತದ ಮುನಾಫ್ ಪಟೇಲ್, ಪಾಕ್ನ ಶಾಹಿದ್ ಆಫ್ರಿದಿ ಸೇರಿ ಹಲವು ವಿದೇಶಿ ಆಟಗಾರರು ಸೇರಿದ್ದಾರೆ.
ನರೈನ್ ವಿಶ್ವದ ಅತ್ಯುತ್ತಮ ಟಿ20 ಬೌಲರ್
ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಸುನಿಲ್ ನರೈನ್ ವಿಶ್ವದ ಅತ್ಯುತ್ತಮ ಟಿ20 ಬೌಲರ್ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ. ನರೈನ್ ಪ್ರಸ್ತುತ ಟಿ20 ಕ್ರಿಕೆಟ್ ನ ಅತ್ಯುತ್ತಮ ಬೌಲರ್ ಆಗಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಾದರೂ ಅವರು ಉತ್ತಮ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅದೃಷ್ಟವಶಾತ್, ಅವರು ಕೋಲ್ಕತ್ತಾ ತಂಡದಲ್ಲಿದ್ದಾರೆ. ಅವರ ವಿರುದ್ಧ ಆಡುವುದು ಮತ್ತು ಅವರನ್ನು ನಿಯಂತ್ರಿಸುವುದು ತುಂಬಾ ಕಷ್ಟ ಎಂದು ಹಸ್ಸಿ ತಿಳಿಸಿದ್ದಾರೆ.
https://www.youtube.com/watch?v=_st-YDZlTCE