ವಾಷಿಂಗ್ಟನ್ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದ್ದು ಅಮೆರಿಕ ಮತ್ತು ಇರಾನ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಒಂದೆಡೆ ಇರಾನ್ ದೇಶದ ಆಂತರಿಕ ಪ್ರತಿಭಟನೆಗಳಿಂದ ನಲುಗುತ್ತಿದ್ದರೆ ಮತ್ತೊಂದೆಡೆ ಅಮೆರಿಕದ ಅತ್ಯಂತ ಪ್ರಬಲ ಯುದ್ಧ ನೌಕೆ ಇರಾನ್ ಗಡಿಯತ್ತ ಮುನ್ನುಗ್ಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಅಮೆರಿಕದ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಇರಾನ್ ನಮ್ಮ ಮೇಲೆ ದಾಳಿ ನಡೆದರೆ ತಕ್ಕ ಶಾಸ್ತಿ ಕಾದಿದೆ ನಮ್ಮ ಬೆರಳುಗಳು ಟ್ರಿಗರ್ ಮೇಲಿವೆ ಎಂದು ಎಚ್ಚರಿಸಿದೆ.
ಸಾಗರದಲ್ಲಿ ತೇಲುವ ಬೃಹತ್ ಏರ್‌ಪೋರ್ಟ್ ಅಬ್ರಹಾಂ ಲಿಂಕನ್
ಅಮೆರಿಕದ ನೌಕಾಪಡೆಯ ಹೆಮ್ಮೆಯ ಪ್ರತೀಕವಾಗಿರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ ನೌಕೆಯು ಏಷ್ಯಾದಿಂದ ತನ್ನ ದಿಕ್ಕನ್ನು ಬದಲಿಸಿ ಹಿಂದೂ ಮಹಾಸಾಗರದ ಮೂಲಕ ಇರಾನ್ ಕರಾವಳಿಯತ್ತ ಧಾವಿಸುತ್ತಿದೆ. ಇದು ಕೇವಲ ಒಂದು ಹಡಗಲ್ಲ ಬದಲಾಗಿ ಸಮುದ್ರದಲ್ಲಿ ಚಲಿಸುವ ಬೃಹತ್ ವಿಮಾನ ನಿಲ್ದಾಣ ಎಂದೇ ಖ್ಯಾತಿ ಪಡೆದಿದೆ. ಡೀಸೆಲ್ ಅಥವಾ ಪೆಟ್ರೋಲ್ ಬದಲಿಗೆ ಪರಮಾಣು ರಿಯಾಕ್ಟರ್ ಶಕ್ತಿಯಿಂದ ಚಲಿಸುವ ಈ ನೌಕೆಯು ಏಕಕಾಲದಲ್ಲಿ ಸುಮಾರು 90ಕ್ಕೂ ಹೆಚ್ಚು ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಶತ್ರು ರಾಷ್ಟ್ರಗಳು ಇದರ ಮೇಲೆ ಕ್ಷಿಪಣಿ ದಾಳಿ ನಡೆಸಲು ಮುಂದಾದರೆ ಅದನ್ನು ಆಗಸದಲ್ಲೇ ಹೊಡೆದುರುಳಿಸುವ ಸ್ವಯಂಚಾಲಿತ ಹಾಗೂ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಇದು ಒಳಗೊಂಡಿದೆ. ಇಂತಹ ವಿನಾಶಕಾರಿ ನೌಕೆಯನ್ನು ಅಮೆರಿಕ ರಕ್ಷಣಾ ಇಲಾಖೆಯು ಅತ್ಯಂತ ನಿರ್ಣಾಯಕ ಹಂತಗಳಲ್ಲಿ ಮಾತ್ರ ಬಳಸುತ್ತದೆ ಎಂಬುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಟ್ರಂಪ್ ಖಡಕ್ ಎಚ್ಚರಿಕೆ
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಅಣ್ವಸ್ತ್ರ ಚಟುವಟಿಕೆಗಳು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ನೌಕಾಪಡೆ ಇರಾನ್ ಕಡೆಗೆ ಸಾಗುತ್ತಿರುವುದು ನಿಜ. ಇದನ್ನು ಬಳಸುವ ಅನಿವಾರ್ಯತೆಯನ್ನು ಇರಾನ್ ತರುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಅಮೆರಿಕದ ಹಿತಾಸಕ್ತಿಗೆ ಧಕ್ಕೆ ಬಂದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅಗತ್ಯ ಬಿದ್ದರೆ ಹಿಂದೆಂದೂ ಕಾಣದ ರೀತಿಯಲ್ಲಿ ಮಿಲಿಟರಿ ಶಕ್ತಿಯನ್ನು ಪ್ರಯೋಗಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಬೆರಳು ಟ್ರಿಗರ್ ಮೇಲಿದೆ ಎಂದ ಇರಾನ್
ಅಮೆರಿಕದ ನೌಕಾಪಡೆ ತಮ್ಮ ಗಡಿಯತ್ತ ಬರುತ್ತಿರುವ ವರದಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇರಾನ್‌ನ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕೋರ್ ಕಮಾಂಡರ್ ಅಮೆರಿಕಕ್ಕೆ ತಿರುಗೇಟು ನೀಡಿದ್ದು ಅಮೆರಿಕ ನಮ್ಮ ದೇಶದ ಮೇಲೆ ದಾಳಿ ನಡೆಸುವ ದುಸ್ಸಾಹಸಕ್ಕೆ ಕೈಹಾಕಿದರೆ ಅದನ್ನು ಪೂರ್ಣ ಪ್ರಮಾಣದ ಯುದ್ಧ ಎಂದು ಘೋಷಿಸಲಾಗುವುದು. ನಮ್ಮ ಸೈನ್ಯ ಸರ್ವಸನ್ನದ್ಧವಾಗಿದ್ದು ನಮ್ಮ ಬೆರಳುಗಳು ಟ್ರಿಗರ್ ಮೇಲಿವೆ ಎಂದು ಗುಡುಗಿದ್ದಾರೆ.
ಹೊತ್ತಿ ಉರಿಯುತ್ತಿದೆ ಇರಾನ್
ಇರಾನ್‌ನಲ್ಲಿ ಆಂತರಿಕವಾಗಿ ಪರಿಸ್ಥಿತಿ ಕೈಮೀರುತ್ತಿದೆ. ತೈಲ ಸಂಪದ್ಭರಿತ ರಾಷ್ಟ್ರವಾಗಿದ್ದರೂ ಅಲ್ಲಿನ ಸಾಮಾನ್ಯ ಜನರು ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದಾರೆ. ಸರ್ಕಾರದ ವಿರುದ್ಧದ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನರ ಆಕ್ರೋಶ ಮುಗಿಲು ಮುಟ್ಟಿದೆ. ಮೂಲಗಳ ಪ್ರಕಾರ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಇದುವರೆಗೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಇರಾನ್ ಧಾರ್ಮಿಕ ನಾಯಕ ಆಯತುಲ್ಲಾ ಖೊಮೇನಿ ಸುಮಾರು ಎಂಟು ನೂರು ಮಂದಿಯ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿದ್ದಾರೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಒಟ್ಟಾರೆಯಾಗಿ ಇರಾನ್ ಪ್ರಸ್ತುತ ಆಂತರಿಕ ಕಲಹ ಮತ್ತು ಬಾಹ್ಯ ಯುದ್ಧದ ಭೀತಿಯಲ್ಲಿ ಸಿಲುಕಿ ನಲಗುತ್ತಿದೆ.








