ಹಿಜಾಬ್ ಧರಿಸಿದಿದ್ದಕ್ಕೆ ಸಂದರ್ಶನ ನಿರಾಕರಿಸಿದ ಇರಾನ್ ಅಧ್ಯಕ್ಷ..
ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ವಿರುದ್ಧ ಹೋರಾಡುತ್ತಿದ್ದಾರೆ. ಕೂದಲು ಕತ್ತರಿಸುತ್ತಾ… ಹಿಜಾಬ್ ಗಳನ್ನ ಸುಡುತ್ತಾ ಪ್ರತಿಭಟನಾ ರ್ಯಾಲಿಗಳನ್ನ ನಡೆಸುತ್ತಿದ್ದಾರೆ. ಇಷ್ಟಾದರೂ ಇರಾನ್ ಅಧ್ಯಕ್ಷರು ಹಿಜಾಬ್ ಗಾಗಿ ಪಟ್ಟುಹಿಡಿದಿದ್ದಾರೆ.
ಇರಾನ್ ಮೂಲದ ಮಹಿಳಾ ಪತ್ರಕರ್ತೆಯೊಬ್ಬರು ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಂದರ್ಶನ ನೀಡಲು ನಿರಾಕರಿಸಿದ್ದಾರೆ. ಇರಾನ್ ಅಧ್ಯಕ್ಷರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ತೆರಳಿದ್ದರು.
ಈ ಸಂದರ್ಭದಲ್ಲಿ, ಸಿಎನ್‌ಎನ್‌ನ ಪ್ರಸಿದ್ಧ ಮಹಿಳಾ ಪತ್ರಕರ್ತೆ ಕ್ರಿಸ್ಟಿಯಾನಾ ಅಮನ್‌ಪೋರ್ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಅವರನ್ನು ಸಂದರ್ಶಿಸಲು ಸಿದ್ಧರಾಗಿದ್ದರು. ಸಂದರ್ಶನದ ಮೊದಲು ಹಿಜಾಬ್ ಧರಿಸುವಂತೆ ಅಧ್ಯಕ್ಷರ ಸಹಾಯಕರು ಆದೇಶಿಸಿದ್ದರು.
ಆದರೆ ಅಧ್ಯಕ್ಷರು ನ್ಯೂಯಾರ್ಕ್‌ನಲ್ಲಿದ್ದಾರೆ, ಅಲ್ಲಿ ಹಿಜಾಬ್‌ಗೆ ಸಂಬಂಧಿಸಿದ ಯಾವುದೇ ಸಂಪ್ರದಾಯಗಳಿಲ್ಲ ಎಂದು ಅಮನ್‌ಪೋರ್ ಅವರಿಗೆ ವಿವರಿಸಿದ್ದಾರೆ. ಆದರೆ ಸಹಾಯಕರು ಆಕೆಯ ವಾದಕ್ಕೆ ಕಿವಿಗೊಡಲಿಲ್ಲ. ಹಿಜಾಬ್ ಧರಿಸಿದರೆ ಮಾತ್ರ ಸಂದರ್ಶನ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಅವರು ಒಪ್ಪದ ಕಾರಣ ಇರಾನ್ ಅಧ್ಯಕ್ಷರು ಸಂದರ್ಶನವನ್ನು ರದ್ದುಗೊಳಿಸಿದ್ದಾರೆ ಎಂದು ಅಮನ್‌ಪೋರ್ ಹೇಳಿದ್ದಾರೆ.
ಖಾಲಿ ಕುರ್ಚಿಯ ಮುಂದೆ ಏಕಾಂಗಿಯಾಗಿ ಕುಳಿತಿರುವ ಚಿತ್ರದೊಂದಿಗೆ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮಾತನಾಡಿ, ಇರಾನ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು, ಹಿಜಾಬ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಗೊಂದಲಕ್ಕೆ ಕಾರಣವಾಗುವ ಕ್ರಮಗಳು ಸ್ವೀಕಾರಾರ್ಹವಲ್ಲ. ಪೊಲೀಸ್ ಕಸ್ಟಡಿಯಲ್ಲಿ ಮಹ್ಸಾ ಅಮಿನಿ (22) ಸಾವಿನ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.








