ಬೆಂಗಳೂರು : ಜಿಎಸ್ ಟಿ ಸಂಗ್ರಹದ ಭಾರಿ ಕುಸಿತದ ಪರಿಣಾಮ ಸಂಕಷ್ಟದಲ್ಲಿರುವ ರಾಜ್ಯಗಳು, ನಷ್ಟ ಪರಿಹಾರಕ್ಕೆ ಸಾಲ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದ್ದು,ಇದಕ್ಕೆ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸುತ್ತಿವೆ. ಅದರಂತೆ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.
ದಿನೇಶ್ ಗುಂಡುರಾವ್ ತಮ್ಮ ಟ್ವೀಟ್ ನಲ್ಲಿ, ನಿರ್ಮಲಾ ಸೀತಾರಮನ್ ಅವರೇ, ಇದ್ಯಾವ ಸೀಮೆಯ ಆರ್ಥಿಕ ನೀತಿ. ಜಿಎಸ್ಟಿ ಮೂಲಕ ಸಂಗ್ರಹವಾದ ದುಡ್ಡಿನಲ್ಲಿ ಆಯಾ ರಾಜ್ಯಗಳಿಗೆ ಪಾಲು ಕೊಡಬೇಕೆಂದು ಜಿಎಸ್ ಟಿ ಕಾಯಿದೆಯಲ್ಲೇ ಇಲ್ಲವೆ..? ನಮಗೆ ಬರಬೇಕಾದ ಪಾಲು ಬಿಟ್ಟು ನಾವು ಸಾಲಕ್ಕಾಗಿ ಆರ್ ಬಿಐ ಕೈ ಕಾಲು ಹಿಡಿಯಬೇಕೆ..? ಎಂದು ಪ್ರಶ್ನಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರೇ, ನಿಮ್ಮ ಸರ್ಕಾರ ರಾಜ್ಯಕ್ಕೆ ಬರಬೇಕಾಗಿದ್ದ 13,700 ಕೋಟಿ ಬಾಕಿಯನ್ನು ಇನ್ನೂ ಕೊಟ್ಟಿಲ್ಲ. ಬಾಕಿ ಹಣ ಪಾವತಿಸದೆ, ನ್ಯಾಯಯುತವಾಗಿ ಸಿಗಬೇಕಾದ ಪಾಲು ಕೊಡದೆ, ಸಾಲ ಮಾಡಿ ಎನ್ನುವ ನಿಮ್ಮಂತ ಅರ್ಥ ಸಚಿವರು ನಮ್ಮ ದೇಶದ ದೌರ್ಭಾಗ್ಯವಲ್ಲದೆ ಮತ್ತೇನು..? ಎಂಬುದಾಗಿ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.