ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ರಾಷ್ಟ್ರದ ಸುರಕ್ಷತೆ ಕುರಿತಂತೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಪಾಕಿಸ್ತಾನ ತನ್ನ ಹಿಟ್‌ಲಿಸ್ಟ್ ತಯಾರಿಸುತ್ತಿದ್ದು, ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ಸಾಧ್ಯತೆ ಬಗ್ಗೆ ಹಲವಾರು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಈ ಪೈಕಿ, ಬೆಂಗಳೂರು ಈ ಪಟ್ಟಿಯಲ್ಲಿ ಇದೆಯಾ ಎಂಬ ಪ್ರಶ್ನೆ ಹಲವು ಜನರಲ್ಲಿ ಆತಂಕ ಹುಟ್ಟಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದು, ಬೆಂಗಳೂರು ಪಾಕಿಸ್ತಾನದ ಹಿಟ್‌ಲಿಸ್ಟ್‌ನಲ್ಲಿದೆಯೋ ಅಥವಾ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ನಮಗೆ ಗೊತ್ತಿಲ್ಲ. ಆದರೆ ನಾವು ಯಾವುದೇ ಶಂಕೆಗೂ ಅವಕಾಶ ನೀಡದೆ, ಭದ್ರತಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರ ಗೃಹ ಸಚಿವಾಲಯದಿಂದ ಬಂದಿರುವ ಸೂಚನೆಗಳಂತೆ, ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದೇವೆ, ಎಂದು ತಿಳಿಸಿದ್ದಾರೆ.
ಸಚಿವರ ಈ ಹೇಳಿಕೆ ಸಾರ್ವಜನಿಕರಲ್ಲಿ ಸ್ವಲ್ಪ ಮಟ್ಟಿಗೆ ಭರವಸೆ ಮೂಡಿಸಿದರೂ, ಹೈಅಲರ್ಟ್ ಪರಿಸ್ಥಿತಿಯಲ್ಲಿ ಪೊಲೀಸರು ಹಾಗೂ ಇತರೆ ಭದ್ರತಾ ದಳಗಳು ತುರ್ತು ಕಾರ್ಯಾಚರಣೆಯಲ್ಲೇ ತೊಡಗಿವೆ. ನಗರದ ಪ್ರಮುಖ ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣ, ಎಂ.ಜಿ ರಸ್ತೆ, ಐ.ಟಿ ಪಾರ್ಕ್‌ಗಳು ಹಾಗೂ ವಿಧಾನಸೌಧದ ಸುತ್ತಮುತ್ತ ಭದ್ರತೆ ಹೆಚ್ಚು ಮಾಡಲಾಗಿದೆ.
ರಾಜ್ಯ ಸರ್ಕಾರವು ಖಚಿತ ಮಾಹಿತಿ ಇಲ್ಲದಿದ್ದರೂ ಕೂಡ, ಯಾವುದೇ ಅನಾಹುತವನ್ನು ತಪ್ಪಿಸಲು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರೂ ಸಹ ಎಚ್ಚರಿಕೆ ವಹಿಸಿ, ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಅಧಿಕಾರಿಗಳಿಗೆ ತಿಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.








