ರೋಹಿತ್ ಶರ್ಮಾ ಮಂಡಿ ನೋವು…ಬಿಸಿಸಿಐಗೆ ತಲೆನೋವು.. ಟೀಮ್ ಇಂಡಿಯಾದಲ್ಲಿ ಏನಾಗುತ್ತಿದೆ..?
ರೋಹಿತ್ ಶರ್ಮಾ…
ಟೀಮ್ ಇಂಡಿಯಾದ ಹಿಟ್ ಮ್ಯಾನ್. ವಿಶ್ವ ಕ್ರಿಕೆಟ್ ನ ಸ್ಫೋಟಕ ಬ್ಯಾಟ್ಸ್ ಮೆನ್. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್‍ನ ರನ್ ಮೇಷಿನ್.
ಆದ್ರೆ ಸದ್ಯ ರೋಹಿತ್ ಶರ್ಮಾ ವಿವಾದಕ್ಕೆ ಕಾರಣವಾಗಿದ್ದಾರೆ. ಅದಕ್ಕೆ ಕಾರಣವಾಗಿದ್ದು ಗಾಯ.
ಹೌದು, ರೋಹಿತ್ ಶರ್ಮಾ ಗಾಯದಿಂದ ಬಳಲುತ್ತಿರುವುದು ಇದೇನೂ ಮೊದಲಲ್ಲ. ಕಳೆದ ಐದಾರು ವರ್ಷಗಳಿಂದ ರೋಹಿತ್ ಮಂಡಿನೋವು, ತೊಡೆ ನೋವು, ಪಾದ ನೋವಿನಿಂದ ಬಳಲುತ್ತಿದ್ದಾರೆ. ಇದೀಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲೂ ರೋಹಿತ್ ಶರ್ಮಾ ಮಂಡಿ ನೋವಿನಿಂದ ಬಳಲುತ್ತಿದ್ದರು.
ಇದೀಗ ಮತ್ತೆ ಗಾಯದಿಂದ ಚೇತರಿಸಿಕೊಂಡು ತಂಡದ 11ರ ಬಳಗದಲ್ಲಿದ್ದಾರೆ. ನಾಲ್ಕು ಪಂದ್ಯಗಳಿಂದ ದೂರ ಉಳಿದಿದ್ದ ರೋಹಿತ್ ಶರ್ಮಾ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ವಿರುದ್ಧ ಕಣಕ್ಕಿಳಿದಿದ್ದರು.
ಟಾಸ್ ವೇಳೆ ರೋಹಿತ್ ಶರ್ಮಾ ತಾನು ಫಿಟ್ ಆಗಿದ್ದೇನೆ. ಗಾಯದಿಂದ ಗುಣಮುಖನಾಗಿದ್ದೇನೆ ಎಂದು ಸರ್ಟಿಫಿಕೇಟ್ ಕೂಡ ನೀಡಿದ್ದರು.
ಆದ್ರೆ ರೋಹಿತ್ ಅವರ ಸ್ವಘೋಷಿತ ನಿರ್ಧಾರ ಬಿಸಿಸಿಐ ಹಾಗೂ ಕೆಲವು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಅದಕ್ಕೆ ಮುಖ್ಯ ಕಾರಣ, ರೋಹಿತ್ ಶರ್ಮಾ ಅವರ ಗಾಯವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಆಸ್ಟ್ರೇಲಿಯಾ ಪ್ರವಾಸದಿಂದಲೂ ಕೈಬಿಟ್ಟಿತ್ತು.
ಆದ್ರೆ ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಹೀಗಾಗಿ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್ ಸರ್ಕಾರ್ ಅವರು ರೋಹಿತ್ ಶರ್ಮಾ ವಿರುದ್ಧ ಕಿಡಿಕಾರಿದ್ದಾರೆ.
ರೋಹಿತ್ ಶರ್ಮಾಗೆ ದೇಶಕ್ಕಿಂತ ಐಪಿಎಲ್ ಟೂರ್ನಿಯೇ ಮುಖ್ಯವಾಗಿದೆಯಾ ಅಂತ ಪ್ರಶ್ನೆ ಮಾಡಿದ್ದಾರೆ.
ಇನ್ನೊಂದೆಡೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಟ್ಟಿರುವ ಬಗ್ಗೆ ಸಮರ್ಥನೆ ಕೂಡ ಮಾಡಿಕೊಂಡಿದ್ದರು.
ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ನ ಆಸ್ತಿ. ಹೀಗಾಗಿ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದೇ ಅವರನ್ನು ಆಡಿಸುವುದು ಸರಿಯಲ್ಲ ಎಂದು ಹೇಳಿದ್ದರು.
ಇದೆಲ್ಲದರ ಮಧ್ಯೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಪರ ಮೈದಾನಕ್ಕಿಳಿದಿದ್ದಾರೆ.
ಪಂದ್ಯದ ವೇಳೆ ರೋಹಿತ್ ಶರ್ಮಾ ಗಾಯದಿಂದ ಬಳಲುತ್ತಿರುವ ಸೂಚನೆಯೂ ಸಿಕ್ಕಿಲ್ಲ. ಆರಾಮವಾಗಿಯೇ ಬ್ಯಾಟ್ ಬೀಸುತ್ತಿದ್ದರು. ಮೈದಾನದಲ್ಲೂ ಯಾವುದೇ ಸಮಸ್ಯೆಗಳು ಇಲ್ಲದೇ ಫೀಲ್ಡಿಂಗ್ ಕೂಡ ಮಾಡುತ್ತಿದ್ದರು.
ಒಟ್ಟಿನಲ್ಲಿ ರೋಹಿತ್ ಶರ್ಮಾ ಅವರ ಫಿಟ್ ನೆಸ್, ಗಾಯ ಈಗ ಬಿಸಿಸಿಐಗೆ ಇಕ್ಕಟ್ಟಿಗೆ ಸಿಲುಕಿಸಿದೆ.