ಹಾಗೇ ಸುಮ್ಮನೆ ವಿಕೆಟ್ ಕೈಚೆಲ್ಲಿಕೊಂಡ ರಿಷಬ್ ಪಂತ್… ಅತೀಯಾದ ಆತ್ಮವಿಶ್ವಾಸವೇ ಪಂತ್‍ಗೆ ಅಪತ್ತು…!
ರಿಷಬ್ ಪಂತ್… ವಿಕೆಟ್ ಕೀಪಿಂಗ್ ನಲ್ಲಿ ಅಷ್ಟಕ್ಕಷ್ಟೇ.. ಆದ್ರೆ ಬ್ಯಾಟಿಂಗ್ ನಲ್ಲಿ ನಂಬಲು ಅಸಾಧ್ಯವಾದ ಆಟಗಾರ.
ಚಂಚಲ ಮನಸ್ಥಿತಿಯನ್ನು ಹೊಂದಿರುವ ರಿಷಬ್ ಪಂತ್ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿಕೊಳ್ಳುತ್ತಿದ್ದಾರೆ. ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿಕೊಡುವಂತಹ ಸಾಮಥ್ರ್ಯವನ್ನು ಹೊಂದಿದ್ರೂ ಕೂಡ ಯಾವಾಗ ವಿಕೆಟ್ ಕೈಚೆಲ್ಲಿಕೊಳ್ಳುತ್ತಾರೆ ಅಂತ ಹೇಳೋಕೆ ಆಗಲ್ಲ.
ಹೀಗೆ ವಿಚಿತ್ರ ಮನೋಸ್ಥಿತಿ, ಅತೀಯಾದ ಆತ್ಮವಿಶ್ವಾಸದಿಂದಲೇ ಟೀಕೆಗೂ ಗುರಿಯಾಗುತ್ತಿದ್ದಾರೆ. ಚೆನ್ನೈ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅಮೋಘ ಆಟವನ್ನಾಡಿದ್ರು. ಅಲ್ಲದೆ ಅಜೇಯ 58 ರನ್ ಕೂಡ ಸಿಡಿಸಿದ್ರು.
ಆದ್ರೆ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ನಲ್ಲಿ ಮುಂಬಡ್ತಿ ಪಡೆದುಕೊಂಡ ರಿಷಬ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ರಹಾನೆ ಜಾಗದಲ್ಲಿ ಪಂತ್ ಗೆ ಆಡುವ ಅವಕಾಶ ಸಿಕ್ಕರೂ ಕೂಡ ಗಡಿಬಿಡಿ ಹಾಗೂ ಹೊಡಿಬಡಿಯ ಆಟಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿಕೊಂಡಿದ್ದಾರೆ.
ಪ್ರತಿ ಎಸೆತದಲ್ಲೂ ರನ್ ಬರಬೇಕು.. ಎದುರಾಳಿ ಬೌಲರ್ ಗಳ ಆತ್ಮಸ್ಥೈರ್ಯವನ್ನು ಕಂಗೆಡಿಸಬೇಕು ಅನ್ನೋ ಗೇಮ್ ಪ್ಲಾನ್ ಇದ್ರೂ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಬೀಸಬೇಕು ಅನ್ನೋದನ್ನು ಮರೆತಂತೆ ಆಡುತ್ತಾರೆ ರಿಷಬ್ ಪಂತ್.
ಹಾಗೇ ನೋಡಿದ್ರೆ ಎರಡನೇ ಪಂದ್ಯದ ಮೂರನೇ ದಿನ ಚೇತೇಶ್ವರ ಪೂಜಾರ ಮತ್ತು ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಾಗ ರಿಷಬ್ ಪಂತ್ ಎಚ್ಚರಿಕೆಯ ಆಟವನ್ನಾಡಬೇಕಾಗಿತ್ತು.
ನಾಯಕ ವಿರಾಟ್ ಕೊಹ್ಲಿಯ ಜೊತೆ ಸೇರಿಕೊಂಡು ತಂಡಕ್ಕೆ ಆಧಾರವಾಗಬೇಕಿತ್ತು. ಆದ್ರೆ ರಿಷಬ್ ಪಂತ್ ಆ ಮನಸ್ಥಿತಿಯಲ್ಲಿರಲಿಲ್ಲ. ಪಟಪಟನೇ ರನ್ ಗಳಿಸಬೇಕು ಅನ್ನೋ ಆತುರಕ್ಕೆ ಬಿದ್ದು ಸ್ಟಂಪ್ ಔಟಾದ್ರು.
ರಿಷಬ್ ಪಂತ್ ಕ್ರೀಸ್ ನಲ್ಲಿದ್ದಾಗ ವಿರಾಟ್ ಕೊಹ್ಲಿ ಸಲಹೆ ಮಾರ್ಗದರ್ಶನಗಳನ್ನು ನೀಡುತ್ತಾರೆ. ಆದ್ರೆ ಅದನ್ನು ರಿಷಬ್ ಪಂತ್ ಕಿವಿಗೆ ಹಾಕಿಕೊಳ್ಳಲಿಲ್ಲ.
ಒಂದೊಂದು ರಿಷಬ್ ಪಂತ್ ಬ್ಯಾಟಿಂಗ್ ಮನೋಭಾವನೆ ವೀರೇಂದ್ರ ಸೆಹ್ವಾಗ್ ನೆನಪಿಸುತ್ತಿದೆ. ಹೊಡಿಬಡಿ ಆಟದಿಂದಲೇ ಸದ್ದು ಮಾಡುತ್ತಿದ್ದ ಸೆಹ್ವಾಗ್ ನಂತೆ ರಿಷಬ್ ಪಂತ್ ಕೂಡ ನೈಜ ಆಟಗಾರ. ಆದ್ರೆ ತಂಡದ ಪರಿಸ್ಥಿತಿಗೆ ತಕ್ಕಂತೆ ಆಟವಾಡಬೇಕು ಅಲ್ವಾ?
ಇನ್ನು ಚೆನ್ನೈ ಪಿಚ್ ಸ್ಪಿನ್ನರ್ ಗಳಿಗೆ ಅನುಕೂಲವಾಗುತ್ತಿದೆ. ಹಾಗಂತ ಭಾರತ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ರೂ ಇಂಗ್ಲೆಂಡ್ ಗೆ ಸವಾಲು ಹಾಕುವಂತಹ ರನ್ ಗಳಿಸಿಲ್ಲ. ಪಂದ್ಯ ಮುಗಿಯಲು ಇನ್ನೂ ಮೂರು ದಿನಗಳಿವೆ. ಹಾಗಾಗಿ ಇಂದು ಪೂರ್ತಿಯಾಗಿ ಟೀಮ್ ಇಂಡಿಯಾ ಆಡಿ ಇನ್ನುಳಿದ ಎರಡು ದಿನ ಇಂಗ್ಲೆಂಡ್ ವಿರುದ್ಧ ಒತ್ತಡ ಹೇರಿದ್ರೆ ಗೆಲ್ಲುವ ಅವಕಾಶಗಳು ಹೆಚ್ಚಿರುತ್ತವೆ.
ಈಗಾಗಲೇ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ 86ಕ್ಕೆ ಐದು ವಿಕೆಟ್ ಕಳೆದುಕೊಂಡಿದೆ.
ಗಿಲ್, ಪೂಜಾರ, ರೋಹಿತ್, ರಿಷಬ್ ಪಂತ್, ರಹಾನೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 195 ರನ್ ಗಳ ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಎರಡನೇ ಇನಿಂಗ್ಸ್ ನಲ್ಲಿ ಕನಿಷ್ಠ 205 ರನ್ ಗಳನ್ನಾದ್ರೂ ಕಲೆ ಹಾಕಬೇಕು.
ಇನ್ನು ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳು ಟೀಮ್ ಇಂಡಿಯಾದ ಬೌಲಿಂಗ್ ದಾಳಿಯ ಎದುರು ದಿಟ್ಟವಾಗಿ ಉತ್ತರ ನೀಡಿದ್ರೆ ಫಲಿತಾಂಶ ಏನು ಬೇಕಾದ್ರೂ ಆಗಬಹುದು .
ಆದ್ರೆ ಪಿಚ್ ನ ವರ್ತನೆಯನ್ನು ನೋಡಿದಾಗ ಪಂದ್ಯ ಹರ್ಭಜನ್ ಸಿಂಗ್ ಹೇಳಿದಂತೆ ನಾಲ್ಕನೇ ದಿನವೇ ಪಂದ್ಯ ಮುಗಿಯಬಹುದು. ಸ್ಪಷ್ಟ ಫಲಿತಾಂಶ ಬರಬಹುದು.








