ಗದಗ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಇದೀಗ ಮಹತ್ವದ ಹಾಗೂ ಸ್ಫೋಟಕ ತಿರುವು ಸಿಕ್ಕಿದೆ. ಶಾಸಕರನ್ನು ಉದ್ದೇಶಪೂರ್ವಕವಾಗಿ ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಲು ಸ್ವಜಾತಿಯ ಸ್ವಾಮೀಜಿಯೊಬ್ಬರು ನಡೆಸಿರಬಹುದಾದ ಬೃಹತ್ ಷಡ್ಯಂತ್ರದ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಸ್ವಜಾತಿಯ ಶಾಸಕನ ವಿರುದ್ಧವೇ ಸ್ವಾಮೀಜಿ ಹೆಣೆದ ಚಕ್ರವ್ಯೂಹ
ಶಿರಹಟ್ಟಿ ತಾಲೂಕಿನ ಆದರಹಳ್ಳಿ ಕುಮಾರ ಮಹಾರಾಜರ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ಯಕರ್ತರೊಬ್ಬರ ನಡುವೆ ನಡೆದಿದೆ ಎನ್ನಲಾದ 2 ನಿಮಿಷ 36 ಸೆಕೆಂಡುಗಳ ಆಡಿಯೋ ಸಂಭಾಷಣೆ ಈಗ ಜಗಜ್ಜಾಹೀರಾಗಿದೆ. ಬಂಜಾರ ಸಮುದಾಯದ ಪ್ರಭಾವಿ ಶಾಸಕರಾಗಿರುವ ಡಾ. ಚಂದ್ರು ಲಮಾಣಿ ಅವರ ಏಳಿಗೆಯನ್ನು ಸಹಿಸದೇ, ಅವರನ್ನು ರಾಜಕೀಯವಾಗಿ ಮುಗಿಸಲು ಅದೇ ಸಮುದಾಯದ ಸ್ವಾಮೀಜಿ ಸ್ಕೆಚ್ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮುಂದಿನ ಚುನಾವಣೆಯಲ್ಲಿ ಶಾಸಕರಿಗೆ ಟಿಕೆಟ್ ತಪ್ಪಿಸದಿದ್ದರೆ ನನಗೆ ಸಮಾಧಾನವಿಲ್ಲ ಎಂದು ಸ್ವಾಮೀಜಿ ಆಡಿಯೋದಲ್ಲಿ ಶಪಥ ಮಾಡಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಬೆಂಗಳೂರು ಟೀಮ್ ಮತ್ತು ಕೆಮಿಕಲ್ ಪೌಡರ್ ತಂತ್ರ
ವೈರಲ್ ಆಗಿರುವ ಆಡಿಯೋದಲ್ಲಿರುವ ಮಾಹಿತಿಯ ಪ್ರಕಾರ, ಶಾಸಕರನ್ನು ಸಿಕ್ಕಿಹಾಕಿಸಲು ಬೆಂಗಳೂರಿನಿಂದ ಪ್ರತ್ಯೇಕ ತಂಡವೊಂದನ್ನು ಕರೆಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಹಣಕ್ಕೆ ಪೌಡರ್ ಸವರಿ, ಐಟಿ ಅಥವಾ ಲೋಕಾಯುಕ್ತ ದಾಳಿ ಮಾಡಿಸುವ ಮೂಲಕ ಶಾಸಕರನ್ನು ಸುಲಭವಾಗಿ ಟ್ರ್ಯಾಪ್ ಮಾಡಬಹುದು. ಶಿರಾ ಶಾಸಕನಿಗೂ ಇದೇ ರೀತಿ ಮಾಡಿ ಸಿಕ್ಕಿಹಾಕಿಸಲಾಗಿತ್ತು. ಕೆಲಸ ಕೇಳುವ ನೆಪದಲ್ಲಿ ಹೋಗಿ ನೋಟಿಗೆ ಪೌಡರ್ ಹಚ್ಚಿ ಕೊಟ್ಟರೆ ಅವರು ಶಾಶ್ವತವಾಗಿ ಜೈಲು ಸೇರುತ್ತಾರೆ, ಸುಮ್ಮನೆ ಕೂರುತ್ತಾರೆ ಎಂಬ ಆಘಾತಕಾರಿ ಮಾತುಗಳು ಆಡಿಯೋದಲ್ಲಿ ದಾಖಲಾಗಿವೆ.
ಕ್ಯಾಸಿನೋ ಲಿಂಕ್ ಮತ್ತು ರಾಜಕೀಯ ದ್ವೇಷ
ಸಂಭಾಷಣೆಯಲ್ಲಿ ಸೋನು ಲಮಾಣಿ ಎಂಬ ಸಮಾಜದ ಮುಖಂಡ ಹಾಗೂ ಕ್ಯಾಸಿನೋ ವ್ಯವಹಾರ ನಡೆಸುವ ವೀರೇಂದ್ರ ಪಪ್ಪಿ ಎಂಬುವರ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇವರೆಲ್ಲರೂ ನಮ್ಮ ಭಕ್ತರು, ಅಜ್ಜಾರಿಗೆ ಚಂದ್ರು ಲಮಾಣಿ ಟಾರ್ಚರ್ ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಈ ಪ್ಲಾನ್ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಳ್ಳುವ ಧಾಟಿ ಆಡಿಯೋದಲ್ಲಿದೆ. ಒಟ್ಟಿನಲ್ಲಿ ಶಾಸಕರನ್ನು ಇಡಿ ಮತ್ತು ಐಟಿ ಇಕ್ಕಳದಲ್ಲಿ ಸಿಲುಕಿಸಿ, ಮುಂದಿನ ಬಾರಿ ಬಿಜೆಪಿಯಿಂದ ಟಿಕೆಟ್ ಸಿಗದಂತೆ ಮಾಡುವುದೇ ಈ ತಂತ್ರದ ಮುಖ್ಯ ಉದ್ದೇಶವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಸ್ವಾಮೀಜಿ ವಿರುದ್ಧ ರೊಚ್ಚಿಗೆದ್ದ ಬೆಂಬಲಿಗರು
ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಶಾಸಕ ಚಂದ್ರು ಲಮಾಣಿ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಾಮೀಜಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕರ ಆಪ್ತ ಹಾಗೂ ಬಿಜೆಪಿ ಮುಖಂಡ ಶಂಕರ ಮರಾಠಿ, ಇದೊಂದು ಹೀನಾಯ ಕೃತ್ಯ ಎಂದು ಜರಿದಿದ್ದಾರೆ.
ನಮ್ಮ ಶಾಸಕರನ್ನು ನೇರವಾಗಿ ಎದುರಿಸಲು ಆಗದೆ, ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸೇರಿ ಈ ರೀತಿಯ ನೀಚ ಸಂಚು ರೂಪಿಸಿದ್ದಾರೆ. ದೂರುದಾರ ವಿಜಯ್ ಪೂಜಾರ್ ಕಾಂಗ್ರೆಸ್ ಹಿನ್ನೆಲೆಯುಳ್ಳವರು. ಅವರ ತಂದೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ. ಒಂದೇ ಸಮಾಜದವರಾಗಿದ್ದರೂ ಶಾಸಕರ ಏಳಿಗೆಯನ್ನು ಸಹಿಸದೆ ಸ್ವಾಮೀಜಿ ಈ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಶಾಸಕರನ್ನು ಮಟ್ಟ ಹಾಕಲು ಹಣಕ್ಕೆ ಪೌಡರ್ ಹಾಕಿ ರೇಡ್ ಮಾಡಿಸುವ ಮಾತುಗಳನ್ನು ಆಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಲೋಕಾಯುಕ್ತ ಬಲೆಗೆ ಬಿದ್ದ ಶಾಸಕರ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬ ಶಾಸಕರ ಬೆಂಬಲಿಗರ ಆರೋಪಕ್ಕೆ ಈ ವೈರಲ್ ಆಡಿಯೋ ಈಗ ಪುಷ್ಠಿ ನೀಡಿದಂತಾಗಿದೆ.








