ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚುನಾವಣಾ ಕಣದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯಕ್ಕೆ ಕುಮ್ಮಕ್ಕು ನೀಡಿದ ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಹೈಕಮಾಂಡ್ ಈಗ ಶಿಸ್ತು ಕ್ರಮದ ಚಾಟಿ ಬೀಸಿದೆ. ಈ ಬೆಳವಣಿಗೆಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಪ್ರಭಾವಿ ನಾಯಕರ ತಲೆದಂಡವಾಗಿದೆ.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿರುವ ಶಾಸಕ ನಜೀರ್ ಅಹ್ಮದ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ವಿರುದ್ಧ ಹೈಕಮಾಂಡ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಇಬ್ಬರೂ ನಾಯಕರು ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದ ಬಂಡಾಯಕ್ಕೆ ಪರೋಕ್ಷವಾಗಿ ಪ್ರಚೋದನೆ ನೀಡಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಇವರನ್ನು ಸ್ಥಾನದಿಂದ ಕೆಳಗಿಳಿಸಲು ಸೂಚನೆ ನೀಡಲಾಗಿದೆ.
ಈಗಾಗಲೇ ಹೈಕಮಾಂಡ್ ಸೂಚನೆಯ ಮೇರೆಗೆ ಅಬ್ದುಲ್ ಜಬ್ಬಾರ್ ಅವರು ತಮ್ಮ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಏಪ್ರಿಲ್ 10 ರಂದು ರಾಜೀನಾಮೆ ಪತ್ರ ಸಲ್ಲಿಸಿದ್ದರೂ, ಹಳೆಯ ದಿನಾಂಕವಾದ ಏಪ್ರಿಲ್ 2ನ್ನು ನಮೂದಿಸುವ ಮೂಲಕ ಮುಜುಗರ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ ನಜೀರ್ ಅಹ್ಮದ್ ಅವರಿಗೂ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದು, ಅವರು ಸದ್ಯದಲ್ಲೇ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ಸಾಕ್ಷ್ಯ ಸಮೇತ ಬಿಸಿ
ಕಾಂಗ್ರೆಸ್ ಹೈಕಮಾಂಡ್ ಕೇವಲ ಆರೋಪದ ಮೇಲೆ ಈ ಕ್ರಮ ಕೈಗೊಂಡಿಲ್ಲ. ದಾವಣಗೆರೆ ಉಪಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಯ ಸೋಲಿಗೆ ಸಂಚು ರೂಪಿಸಿದ್ದು, ಎಸ್ಡಿಪಿಐ ಅಭ್ಯರ್ಥಿಗೆ ಆರ್ಥಿಕ ನೆರವು ನೀಡಿದ್ದು ಮತ್ತು ಪಕ್ಷೇತರ ಅಭ್ಯರ್ಥಿಗಳು ಕಣದಿಂದ ಸರಿಯದಂತೆ ನೋಡಿಕೊಂಡ ಬಗ್ಗೆ ಪಕ್ಕಾ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ. ವಿಶೇಷವಾಗಿ ಟಿಕೆಟ್ ಸಿಗದಿದ್ದಕ್ಕೆ ಬಂಡಾಯವೆದ್ದಿದ್ದ ಸಾಧಿಕ್ ಪೈಲ್ವಾನ್ ಅವರನ್ನು ಸಮಾಧಾನಪಡಿಸುವ ಬದಲು, ಅವರು ಸ್ಪರ್ಧೆಯಲ್ಲಿ ಮುಂದುವರಿಯುವಂತೆ ಈ ನಾಯಕರೇ ಪ್ರಚೋದಿಸಿದ್ದರು ಎನ್ನಲಾಗಿದೆ.
ಬಂಡಾಯ ಶಮನದ ನಾಟಕ ಮತ್ತು ನಾಯಕರ ನಡವಳಿಕೆ
ಬಂಡಾಯಗಾರರ ಮನವೊಲಿಸಲು ಸಿಎಂ ಮತ್ತು ಡಿಸಿಎಂ ಅವರು ಸಚಿವ ಜಮೀರ್ ಅಹ್ಮದ್, ನಜೀರ್ ಅಹ್ಮದ್, ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಅವರಿಗೆ ಜವಾಬ್ದಾರಿ ನೀಡಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ಆದರೆ ದಾವಣಗೆರೆಗೆ ತೆರಳುವ ಸಮಯದಲ್ಲಿ ಸಚಿವ ಜಮೀರ್ ಅಹ್ಮದ್ ಸಂಪರ್ಕಕ್ಕೆ ಸಿಗದೆ ತಪ್ಪಿಸಿಕೊಂಡರೆ, ನಜೀರ್ ಅಹ್ಮದ್ ಅವರು ಹೆಲಿಪ್ಯಾಡ್ ವರೆಗೆ ಹೋಗಿ ಧರ್ಮಗುರುಗಳ ಆದೇಶವಿದೆ ಎಂದು ಹೇಳಿ ಅರ್ಧಕ್ಕೇ ಮರಳಿದ್ದರು. ನಂತರ ಸಾಧಿಕ್ ಪೈಲ್ವಾನ್ ಅವರು ಬಂಡಾಯ ಹಿಂಪಡೆದಾಗ, ತಮಗೆ ಪ್ರಚೋದನೆ ನೀಡಿದ ನಾಯಕರ ಹೆಸರುಗಳನ್ನು ನೇರವಾಗಿ ಸಿಎಂ ಎದುರೇ ಬಯಲು ಮಾಡಿದ್ದು ಹೈಕಮಾಂಡ್ ಕೆಂಗಣ್ಣಿಗೆ ಕಾರಣವಾಯಿತು.
ಸಚಿವ ಜಮೀರ್ ಅಹ್ಮದ್ ಅವರಿಗೂ ಕಾದಿದೆಯೇ ಸಂಕಷ್ಟ
ದಾವಣಗೆರೆ ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ತಾ ಅವರು ಹೈಕಮಾಂಡ್ ಗೆ ನೀಡಿದ ವರದಿಯಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಒತ್ತಡಕ್ಕೆ ಮಣಿದು ಅಂತಿಮ ಹಂತದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡ ಜಮೀರ್ ಅವರ ನಡೆಯ ಬಗ್ಗೆ ಹೈಕಮಾಂಡ್ ವಿವರಣೆ ಕೇಳುವ ಸಾಧ್ಯತೆ ಇದೆ. ಸದ್ಯಕ್ಕೆ ಇಬ್ಬರು ನಾಯಕರ ಮೇಲೆ ಕ್ರಮ ಜರುಗಿಸಲಾಗಿದ್ದರೂ, ಮುಂದಿನ ದಿನಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಇತರ ನಾಯಕರ ಪ್ರಾಮುಖ್ಯತೆಯನ್ನು ಹಂತಹಂತವಾಗಿ ಕುಗ್ಗಿಸಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿದ್ದಾರೆ.








