ಏನು ಬೇಕಾದ್ರೂ ಮಾಡು..ಆದ್ರೆ ನಿಷೇಧಕ್ಕೆ ಮಾತ್ರ ಗುರಿಯಾಗಬೇಡ… ಇದು ಇಶಾಂತ್ಗೆ ಕೊಹ್ಲಿಯ ಸಲಹೆಯಂತೆ..!
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೆಲವೊಂದು ಬಾರಿ ನಾಯಕ ಅಂತ ಅನ್ನಿಸುವುದೇ ಇಲ್ಲ. ಯಾಕಂದ್ರೆ ಕೊಹ್ಲಿ ಒಬ್ಬ ಪ್ರಬುದ್ಧ ನಾಯಕನ ಬದಲು ಒಬ್ಬ ಆಕ್ರಮಣಕಾರಿ ಆಟಗಾರನಂತೆ ಕಾಣುತ್ತಾರೆ. ಅದಕ್ಕೆ ಕಾರಣವೂ ಇದೆ.
ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಕೂಲ್ ಆಗಿದ್ದುಕೊಂಡೇ ತಂಡವನ್ನು ಮುನ್ನಡೆಸುತ್ತಿದ್ದರು. ಆದ್ರೆ ಕೊಹ್ಲಿ ಭಿನ್ನವಾಗಿ ಕಾಣುತ್ತಾರೆ. ಮೈದಾನದಲ್ಲಿ ಸದಾ ಒರಟನಂತೆ ಕಾಣುವ ಕೊಹ್ಲಿ ಬೌಲರ್ಗಳಿಂದ ವಿಕೆಟ್ ಪಡೆಯಲು ಹುರಿದುಂಬಿಸುತ್ತಾರೆ. ಏಟಿಗೆ ಎದುರೇಟು ಎನ್ನುವಂತೆ ಎದುರಾಳಿ ಆಟಗಾರರು ಮಾತಿನ ಸಮರ ನಡೆಸಿದ್ರೆ ಅದಕ್ಕೆ ತಕ್ಕ ಉತ್ತರವೂ ಅಲ್ಲೇ ಸಿಗುತ್ತೆ. ಅಂತಹ ಮನೋಭಾವನೆಯಲ್ಲಿ ತಂಡವನ್ನು ಮುನ್ನಡೆಸುತ್ತಾರೆ.
ಹೀಗಾಗಿಯೇ ವಿರಾಟ್ ಕೊಹ್ಲಿ ಇಂದು ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗಿ ರೂಪುಗೊಳ್ಳುತ್ತಿದ್ದಾರೆ. ಬ್ಯಾಟಿಂಗ್ ಬೌಲಿಂಗ್ ನಲ್ಲಿ ಅದರಲ್ಲೂ ವೇಗದ ಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದೆ. ವಿಶ್ವದ ಯಾವುದೇ ತಂಡವನ್ನಾದ್ರೂ ಸಮರ್ಥವಾಗಿ ಎದುರಿಸುವಂತಹ ಸಾಮಥ್ರ್ಯ ವಿರಾಟ್ ಪಡೆಗಿದೆ.
ಇದೀಗ ವಿರಾಟ್ ನಾಯಕತ್ವದ ಬಗ್ಗೆ ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮ ಹೇಳುವುದು ಹೀಗೆ… ಮಯಾಂಕ್ ಅಗರ್ವಾಲ್ ಜೊತೆಗಿನ ಲೈವ್ ಕಾರ್ಯಕ್ರಮದಲ್ಲಿ ಕೊಹ್ಲಿಯವರು ಯಾವ ರೀತಿ ತನಗೆ ಬೆನ್ನಲುಬಾಗಿ ನಿಲ್ಲುತ್ತಾರೆ ಎಂಬ
ವಿಷಯವನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಆಕ್ರಮಣಕಾರಿ ಪ್ರವೃತ್ತಿಯ ನಾಯಕ. ಅದನ್ನು ಅವರು ತುಂಬಾನೇ ಇಷ್ಟನೂ ಪಡುತ್ತಾರೆ. ಮೈದಾನದಲ್ಲಿ ಅವರಂತೆ ನೀವು ಆಕ್ರಮಣಕಾರಿ ಪ್ರವೃತ್ತಿಯನ್ನು ಪ್ರದರ್ಶಿಸಿದಾಗ ಅವರು ನಿಮಗೆ ಏನನ್ನು ಹೇಳುವುದಿಲ್ಲ ಅಂತ ಇಶಾಂತ್ ಹೇಳಿಕೊಂಡಿದ್ದಾರೆ.
ವಿರಾಟ್ ಯಾವಾಗಲೂ ಹೇಳುವುದು ಒಂದೇ. ನನಗೆ ವಿಕೆಟ್ ಬೇಕು. ಅದಕ್ಕಾಗಿ ನೀನು ಏನು ಬೇಕಾದ್ರೂ ಮಾಡು. ಆದ್ರೆ ನಿಷೇಧಕ್ಕೆ ಮಾತ್ರ ಗುರಿಯಾಗಬೇಡ ಅಂತ. ನಾನು ಶ್ರೀಲಂಕಾದಲ್ಲಿ ನಿಷೇಧಕ್ಕೆ ಗುರಿಯಾದಾಗಲೂ ಅಷ್ಟೇ. ವಿರಾಟ್ ಹೇಳಿದ್ದು ಇಷ್ಟೇ. ನಿನಗೆ ಏನು ಬೇಕೋ ಅದನ್ನು ಮಾಡು. ಆದ್ರೆ ಬ್ಯಾನ್ ಆಗಬೇಡ ಎಂದು. ಹೀಗೆ ವಿರಾಟ್ ಕೊಹ್ಲಿ ಒಬ್ಬ ನಾಯಕನಾಗಿ ತನಗೆ ಯಾವ ರೀತಿ ಬೆಂಬಲ ನೀಡಿದ್ದರು ಎಂಬುದನ್ನು ಇಶಾಂತ್ ಶರ್ಮಾ ನೆನಪಿಸಿಕೊಂಡ್ರು.
2015ರಲ್ಲಿ ಶ್ರೀಲಂಕಾದಲ್ಲಿ ಇಶಾಂತ್ ಶರ್ಮಾ ಅವರು ನಿಷೇಧಕ್ಕೆ ಗುರಿಯಾಗಿದ್ದರು. ಹೀಗಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇನ್ನು ಇದೇ ವೇಳೆ ಆಸ್ಟ್ರೇಲಿಯಾ ಬಲಿಷ್ಠ ಬ್ಯಾಟ್ಸ್ ಮೆನ್ ಸ್ಟೀವನ್ ಸ್ಮಿತ್ ಅವರ ಜೊತೆಗಿನ ಜಟಾಪಟಿಯನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡ್ರು. ನಾವು ಪುಣೆ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದೇವು. ಬೆಂಗಳೂರಿನ ಪಿಚ್ ಕೂಡ ಏರಿಳಿತಗಳನ್ನು ಕಾಣುತ್ತಿತ್ತು. ಹೀಗಾಗಿ ಸ್ಟೀವನ್ ಸ್ಮಿತ್ ಅವರನ್ನು ತಳಮಳಗೊಳಿಸಬೇಕಾಗಿತ್ತು. ಅದಕ್ಕಾಗಿ ನಾನು ಸಾಕಷ್ಟು ಪ್ರಯತ್ನ ಕೂಡ ಪಟ್ಟೆ. ನನಗೆ ಗೊತ್ತಿತ್ತು. ಆತನ ವಿಕೆಟ್ ಪಡೆದ್ರೆ ಗೆಲುವು ನಮ್ಮದಾಗುತ್ತಿತ್ತು ಎಂಬುದು. ಆದ್ರಿಂದ ಅವರನ್ನು ಗಲಿಬಿಲಿಗೊಳಿಸದೇ ಇದ್ರೆ ಅವರು ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ ಅಂತ ಇಶಾಂತ್ ಮೈದಾನದಲ್ಲಿ ನಡೆದಿರುವ ಕೆಲವೊಂದು ವಿಷ್ಯಗಳನ್ನು ನೆನಪು ಮಾಡಿಕೊಂಡ್ರು.








