ಬೌಂಡರಿ ಹೋದ್ರೆ ಅದಕ್ಕೆ ನಾನು ಜವಾಬ್ದಾರ.. ನೀನು ಬೌಲಿಂಗ್ ಮಾಡು.. ಇಶಾಂತ್ ಗೆ ಧೈರ್ಯ ತುಂಬಿದ್ದ ಮಾಹಿ..!
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಆದ್ರೆ ಧೋನಿ ಒಬ್ಬ ಆಟಗಾರನಾಗಿ, ಬ್ಯಾಟ್ಸ್ ಮೆನ್ ಆಗಿ, ವಿಕೆಟ್ ಕೀಪರ್ ಆಗಿ ಹಾಗೂ ನಾಯಕನಾಗಿ, ಮಾಜಿ ನಾಯಕನಾಗಿ ಟೀಮ್ ಇಂಡಿಯಾಗೆ ಅನನ್ಯ ಕೊಡುಗೆ ನೀಡಿದ್ದಾರೆ.
ನಾಯಕನಾಗಿ ಎರಡು ವಿಶ್ವಕಪ್ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಧೋನಿ ಭಾರತ ಕ್ರಿಕೆಟ್ ತಂಡವನ್ನು ಉತ್ತುಂಗಕ್ಕೇರಿಸಿದ್ದರು. ನಾಯಕನಾಗಿ ಆಟಗರರಿಗೆ ಬೆಂಬಲ ನೀಡುತ್ತಾ, ಸಲಹೆ ಮಾರ್ಗದರ್ಶನದ ಮೂಲಕ ಅವರ ಪ್ರತಿಭೆ, ಸಾಮಥ್ರ್ಯಗಳನ್ನು ಉತ್ತೇಜಿಸುತ್ತಿದ್ದರು. ಹೀಗಾಗಿ ಧೋನಿ ಯಶಸ್ವಿ ನಾಯಕನಾಗಲು ಸಾಧ್ಯವಾಯ್ತು.
ಪಂದ್ಯದ ಪ್ರತಿ ಕ್ಷಣ ಕೂಡ ಏಕಾಗ್ರತೆ ಮತ್ತು ಕೂಲ್ ಆಗಿಯೇ ಇರುತ್ತಿದ್ದ ಧೋನಿ ಕೆಲವೊಂದು ಬಾರಿ ಕುಪಿತಗೊಂಡಿದ್ದೂ ಇದೆ. ಬೌಲರ್‍ಗಳು ಮತ್ತು ಕ್ಷೇತ್ರ ರಕ್ಷಣೆ ಮಾಡುವಾಗ ಆಟಗಾರರು ಮಾತು ಕೇಳದಿದ್ದಾಗ ತನ್ನ ತಾಳ್ಮೆಯನ್ನು ಕಳೆದುಕೊಂಡಾಗ ಮಾತು ಅಷ್ಟೇ ಕಠೋರವಾಗಿರುತ್ತಿತ್ತು. ಹೀಗೆ ಹಲವಾರು ಘಟನೆಗಳು ನಡೆದಿವೆ.
ಈ ಘಟನೆ ನಡೆದಿರುವುದು 2012ರಲ್ಲಿ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ. ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ ಲಯತಪ್ಪಿ ಹೋಗಿತ್ತು. ಶಾರ್ಟ್ ಬಾಲ್, ವೈಡ್ ಬಾಲ್ ಎಸೆಯುತ್ತಿದ್ದರು. ಇದನ್ನು ತಿಳಿದುಕೊಂಡ ಧೋನಿ ಇಶಾಂತ್‍ಗೆ ಸಲಹೆ ನೀಡಿದ್ದರು.
ಚೆಂಡು ಬೌಂಡರಿ ಗೆರೆ ದಾಟಿದ್ರೆ ಅದಕ್ಕೆ ನಾನೇ ಹೊಣೆ. ನೀನು ಬಿಂದಾಸ್ ಆಗಿ ಬೌಲಿಂಗ್ ಮಾಡು. ನಿನಗೆ ಬೇಕಿದ್ರೆ ಹೆಚ್ಚುವರಿ ಫೀಲ್ಡರ್ ನನ್ನು ಅಲ್ಲಿ ನಿಲ್ಲಿಸುತ್ತೇನೆ. ನೀನು ನಿನ್ನ ಸ್ಟೈಲ್ ನಲ್ಲೇ ಬೌಲಿಂಗ್ ಮಾಡು ಎಂದು ಇಶಾಂತ್ ಶರ್ಮಾಗೆ ಧೈರ್ಯ ತುಂಬಿದ್ದರು. ಈ ರೀತಿ ನಾಯಕ ಬೌಲರ್‍ಗೆ ಸಲಹೆ ನೀಡಿ ಬೆನ್ನುತಟ್ಟಿದಾಗ ಎಂಥಾ ಬೌಲರ್‍ಗೂ ಪ್ರೇರಣೆಯಾಗುವುದರಲ್ಲಿ ಸಂದೇಹವೇ ಇಲ್ಲ. ಈ ಪಂದ್ಯದಲ್ಲಿ ಶ್ರೀಶಾಂತ್ ಮೂರು ವಿಕೆಟ್ ಉರುಳಿಸಿದ್ರು.








