ಕೆಪಿಸಿಸಿಗೆ ನೂತನ ಅಧ್ಯಕ್ಷರಾಗಿ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿ ಆದೇಶ ಹೊರಡಿಸಿದೆ. ದೆಹಲಿ ವರಿಷ್ಠರು ಅಳೆದು ತೂಗಿ ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುಂಡ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡುತ್ತಿದ್ದಂತೆ, ರಾಜ್ಯ ಕಾಂಗ್ರೆಸ್ ನ ಮುಂದಿನ ಸಾರಥಿ ಯಾರಾಗ್ತಾರೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡಿತ್ತು. ಒಂದು ಕಡೆ ಡಿ.ಕೆ ಶಿವಕುಮಾರ್ ಅವರೇ ಮುಂದಿನ ಕೆಪಿಸಿಸಿ ಅಧ್ಯಕ್ಷರೆಂದು ಅನಧಿಕೃತವಾಗಿ ಘೋಷಣೆಯೂ ಆಗಿತ್ತು.
ಆದ್ರೆ ಮೂಲ-ವಲಸಿಗ ಕಾಂಗ್ರೆಸ್ ನಾಯಕರ ಕಿತ್ತಾಟದಿಂದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬ ಆಗುತ್ತಲೇ ಹೋಯ್ತು. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಅಧ್ಯಕ್ಷಗಿರಿ ಕೊಡಿಸಲು ದೆಹಲಿಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದರು. ಮತ್ತೊಂದೆಡೆ ಮೂಲ ಕಾಂಗ್ರೆಸ್ ನಾಯಕರಾದ ಕೆ.ಹೆಚ್ ಮುನಿಯಪ್ಪ, ವೀರಪ್ಪ ಮೊಯ್ಲಿ, ಸೇರದಂತೆ ಕೆಲ ನಾಯಕರು ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗಬಾರದೆಂದು ಪ್ರಯತ್ನಿಸಿದ್ದರು.
ಸಾಕಷ್ಟು ಚರ್ಚೆಗಳ ನಂತ್ರ ಕೊನೆಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ಡಿಕೆಶಿ ಅವರನ್ನು ಕೈ ಹೈಕಮಾಂಡ್ ಆಯ್ಕೆ ಮಾಡಿದೆ. ಇದರ ಬೆನ್ನಲ್ಲೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ಕಾರ್ಯಾಧ್ಯಕ್ಷ ಸ್ಥಾನಕ್ಕೆ ಈಶ್ವರ್ ಖಂಡ್ರೆ ರಾಜೀನಾಮೆ?
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಆಯ್ಕೆಗೊಂಡ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟವಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆಯಿಂದಲೂ ಕಾರ್ಯಾಧ್ಯಕ್ಷರಾಗಿರುವ ಈಶ್ವರ್ ಖಂಡ್ರೆ, ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೆ ಮೂಲ ಕಾಂಗ್ರೆಸ್ ನಾಯಕರ ಕೋಟಾದಲ್ಲಿ ತೆರೆಮರೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಭಾರಿ ಮಸಲತ್ತು ಸಹ ನಡೆಸಿದ್ದರು. ಆದ್ರೆ ಕೈ ಹೈಕಮಾಂಡ್ ಡಿಕೆಶಿಗೆ ಪಟ್ಟ ಕಟ್ಟಿದ್ದು, ಈಶ್ವರ್ ಖಂಡ್ರೆ ಅಸಮಾಧಾನಕ್ಕೆ ಕಾರಣವಾಗಿದೆ.
ಎಐಸಿಸಿ ನಡೆಯಿಂದ ಬೇಸರ!
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಈಶ್ವರ್ ಖಂಡ್ರೆಗೆ ನಿರಾಸೆಯಾಗಿದ್ದು ಒಂದು ಕಡೆಯಾದ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮೂವರನ್ನು ಆಯ್ಕೆ ಮಾಡಿರೋದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಈ ಹಿಂದೆ ಖಂಡ್ರೆ, ಪಕ್ಷದಲ್ಲಿ ಒಬ್ಬರಿಗಿಂತ ಹೆಚ್ಚು ಕಾರ್ಯಾಧ್ಯಕ್ಷ ಹುದ್ದೆ ಬೇಡ ಎಂದಿದ್ದರು. ಆದ್ರೆ ಇದೀಗ ತಮ್ಮ ಜೊತೆಗೆ ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹ್ಮದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಈಶ್ವರ್ ಖಂಡ್ರೆ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಈ ಎಲ್ಲಾ ಕಾರಣಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.








