ರಾಜೀನಾಮೆ ಅದೆಲ್ಲ ಗೊತ್ತಿಲ್ಲ, ಈಶ್ವರಪ್ಪ ಅವರನ್ನ ಬಂಧಿಸಬೇಕು – ಡಿಕೆ ಶಿವಕುಮಾರ್
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೆ ಎಸ್ ಈಶ್ವರಪ್ಪ ರಾಜಿನಾಮೆ ಕೊಡುವುದಾಗಿ ಘೋಷಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಈಶ್ವರಪ್ಪ ಅವರನ್ನ ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನಾವು ಕೇವಲ ಈಶ್ವರಪ್ಪ ವಿರುದ್ಧ ಪ್ರತಿಭಟಿಸುತ್ತಿಲ್ಲ ಭ್ರಷ್ಟ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಈಶ್ವರಪ್ಪಗೆ ಸಿ ಎಂ ಬೆಂಬಲ ಇದೆ ಇದು ದೊಡ್ಡ ತಪ್ಪು. ಸಂತೋಷ್ ಆತ್ಮಹತ್ಯೆ ಪ್ರಕರಣ ನ್ಯಾಯಯುತ ತನಿಖೆಯಾಗಬೇಕು. ನಾವು ರಾಜ್ಯದ ಎಲ್ಲಾಕಡೆ ಪ್ರತಿಭಟನೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಬಂಧನಕ್ಕೆ ಒತ್ತಾಯಿಸಿ 24 ಗಂಟೆಗಳ ಹಗಲು-ರಾತ್ರಿ ಧರಣಿ ನಡೆಸುತ್ತೇವೆ. ಶಾಸಕಾಂಗ ಹಾಗೂ ನ್ಯಾಯಾಂಗದ ಬಾಗಿಲಲ್ಲಿ ನಿಂತು ನ್ಯಾಯ ಕೇಳುತ್ತಿದ್ದೇವೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ರಾಜ್ಯಾದ್ಯಂತ ಮುಂದುವರೆಯಲಿದೆ ಎಂದು ಡಿ ಕೆ ಶಿ ಹೇಳಿದ್ದಾರೆ.
ನ್ಯಾಯದ ಪರ ಇರುವ ಕಾಂಗ್ರೆಸ್ ಮಾಡಿದ ದಿಟ್ಟ ಹೋರಾಟದ ಫಲವಾಗಿ 40% ಕಮಿಷನ್ ಸರ್ಕಾರದ ಲಂಚಬಾಕ ಸಚಿವ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ದೊರೆತ ಜಯವಾಗಿದೆ. ನಮ್ಮ ಈ ಹೋರಾಟ ರಾಜ್ಯದಲ್ಲಿ ಕಮಿಷನ್ ದಂಧೆ ನಿಲ್ಲುವವರೆಗೂ ನಡೆಯುತ್ತೆ. ಕರ್ನಾಟ ಕಾಂಗ್ರೆಸ್ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಪ್ರಕಾಶ್ ರಾಥೋಡ್, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ, ಮುಖಂಡರಾದ ಎಂ.ಡಿ ಲಕ್ಷ್ಮೀನಾರಾಯಣ, ರಾಮಚಂದ್ರಪ್ಪ, ಪದ್ಮಾವತಿ, ರಾಜಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.