ಭಾರತದಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ, ಇಸ್ರೇಲ್ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಭಾರತ ಸರ್ಕಾರಕ್ಕೆ ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ಗುರುವಾರ ಧನ್ಯವಾದ ಅರ್ಪಿಸಿದ್ದಾರೆ.
ಭಾರತದಲ್ಲಿದ್ದ ಇಸ್ರೇಲಿ ಪ್ರಜೆಗಳನ್ನು ಭಾರತ ತನ್ನ ಲಾಕ್ ಡೌನ್ ಸಮಯದ ಮಧ್ಯೆ ಸುರಕ್ಷಿತವಾಗಿ ಸ್ಥಳಾಂತರಿಸಿದಕ್ಕೆ ತನ್ನ ನಿಷ್ಠಾವಂತ ಸ್ನೇಹಿತ ಭಾರತಕ್ಕೆ ಇಸ್ರೇಲ್ ಗುರುವಾರ ನಡೆಯುತ್ತಿರುವ ಜಾಗತಿಕ ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಧನ್ಯವಾದ ಅರ್ಪಿಸಿದೆ.
ಕೊರೋನಾ ವೈರಸ್ ಹರಡಲು ಪ್ರಾರಂಭವಾದಾಗ ಇಸ್ರೇಲ್ ಮೊದಲಿಗೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಆದರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಇಸ್ರೇಲ್ ರಾಯಭಾರಿ ಹೇಳಿದ್ದಾರೆ.
ಪ್ರಯಾಣಿಕರ ಸುರಕ್ಷತೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಇಸ್ರೇಲ್ ನ ವಿಮಾನದಲ್ಲಿದ್ದ ಸಿಬ್ಬಂದಿ ಸದಸ್ಯರೊಬ್ಬರು ಹೇಳಿದ್ದಾರೆ. “ನಾವು ಪ್ರಯಾಣಿಕರೊಂದಿಗೆ ಸಂವಹನ ನಡೆಸಲು ಹೋಗುವುದಿಲ್ಲ, ನಾವು ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲಿದ್ದೇವೆ” ಎಂದು ಅವರು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ 18,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಕೊರೋನ ವೈರಸ್ ನ ವ್ಯಾಪಕ ಹರಡುವಿಕೆಯ ಮಧ್ಯೆ, ಏರ್ ಇಂಡಿಯಾ ಶುಕ್ರವಾರ ನವದೆಹಲಿಯಿಂದ ಟೆಲ್ ಅವೀವ್ ಗೆ 300 ಕ್ಕೂ ಹೆಚ್ಚು ಇಸ್ರೇಲಿ ಪ್ರಜೆಗಳನ್ನು ಸ್ಥಳಾಂತರಿಸಲಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿತ್ತು. ತೆರವು ಕಾರ್ಯಾಚರಣೆಗಾಗಿ ಬೋಯಿಂಗ್ 777 ಎಐ -139 ವಿಮಾನಗಳನ್ನು ನಿಯೋಜಿಸಲಾಗಿದೆ.
ಲಭ್ಯವಿರುವ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಇಲ್ಲಿಯವರೆಗೆ ಭಾರತದಲ್ಲಿ 719 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಮತ್ತು ಈವರೆಗೆ 14 ಜನರು ಮಾರಣಾಂತಿಕ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ, ಪ್ರಧಾನಿ ಮೋದಿ ಮಂಗಳವಾರ ಮಧ್ಯರಾತ್ರಿಯಿಂದ ಭಾರತದಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದಾರೆ. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು 21 ದಿನಗಳ ಸಾಮಾಜಿಕ ಅಂತರ ಅಗತ್ಯ ಎಂದು ಹೇಳಿದ್ದಾರೆ. 21 ದಿನಗಳ ಕರ್ಫ್ಯೂ ದೇಶದ ಎಲ್ಲಾ ರಾಜ್ಯಗಳು, ಜಿಲ್ಲೆಗಳು ಮತ್ತು ಗ್ರಾಮಗಳಿಗೆ ಅನ್ವಯಿಸುತ್ತದೆ.
ಮಂಗಳವಾರದ ಮಧ್ಯರಾತ್ರಿಯಿಂದಲೇ, ಭಾರತ ದೇಶಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದು, ಮನೆಯಿಂದ ಹೊರಹೋಗಲು ಸಂಪೂರ್ಣ ನಿರ್ಬಂಧವಿದೆ. ಎಲ್ಲಾ ರಾಜ್ಯಗಳ, ಜಿಲ್ಲೆಗಳ, ಗ್ರಾಮಗಳ ಗಡಿಗಳನ್ನು ಮುಚ್ಚಲಾಗಿದೆ. ಇದು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವುದಾದರೂ ನಾವು ಸಹಿಸಬೇಕಾಗಿದೆ. ಈ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯರ ಜೀವವನ್ನು ಉಳಿಸುವುದು ನನ್ನ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.








