ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಉದ್ಯಮಿ ಎಲೋನ್ ಮಸ್ಕ್ (Elon Musk) ಮಾಲೀಕತ್ವದ ಸ್ಪೇಸ್‌ಎಕ್ಸ್ (Space X) ಕಂಪನಿಯ ರಾಕೆಟ್ ಬಳಸಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿದೆ.
ಇಸ್ರೋದ ಜಿಸ್ಯಾಟ್ -20 ಸಂವಹನ ಉಪಗ್ರಹವನ್ನು ಹೊತ್ತುಕೊಂಡಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ (Space X Falcon 9 Rocket) ಭಾರತೀಯ ಕಾಲಮಾನ ಸೋಮವಾರ ರಾತ್ರಿ 23:45ಕ್ಕೆ ಅಮೆರಿಕದ ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿತ್ತು.
ಈ ವಿಷಯವಾಗಿ ಮಾತನಾಡಿರುವ ಇಸ್ರೋ ಅಧ್ಯಕ್ಷ ಸೋಮನಾಥ್, ಜಿಸ್ಯಾಟ್-20 ಮಿಷನ್ ಅವಧಿ 14 ವರ್ಷ. ಅತ್ಯಂತ ಯಶಸ್ವಿಯಾಗಿ ಉಡಾವಣೆಯಾಗಿದೆ. ನಾವು ಉತ್ತಮ ಕಕ್ಷೆಯನ್ನು ಪಡೆದುಕೊಂಡಿದ್ದೇವೆ. ಉಪಗ್ರಹವು ಆರೋಗ್ಯಕರವಾಗಿದ್ದು ಸೌರ ಫಲಕಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.
ಫಾಲ್ಕನ್ 9 ಮರುಬಳಕೆ ಮಾಡಬಹುದಾದ ರಾಕೆಟ್ ಆಗಿದೆ. ಇಲ್ಲಿಯವರೆಗೆ 19 ಬಾರಿ ಈ ರಾಕೆಟ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಮೊದಲ ಹಂತ ಬೇರ್ಪಟ್ಟ ನಂತರ ಅಟ್ಲಾಂಟಿಕ್ ಸಾಗರದಲ್ಲಿ ನೆಲೆಗೊಂಡಿದ್ದ ಡ್ರೋನ್ ಹಡಗಿನಲ್ಲಿ ಲ್ಯಾಂಡ್ ಆಗಿದೆ ಎಂದು ತಿಳಿಸಿದ್ದಾರೆ.
ಭಾರತದ ಅತಿದೊಡ್ಡ ಉಡಾವಣಾ ನೌಕೆ ಎಂದೇ ಖ್ಯಾತಿ ಪಡೆದಿರುವ ʼಬಾಹುಬಲಿ’ ಜಿಎಸ್‌ಎಲ್‌ವಿ ಮಾರ್ಕ್-3 ಗರಿಷ್ಠ 4,100 ಕೆ.ಜಿ. ತೂಕದ ಉಪಗ್ರಹವನ್ನು ಮಾತ್ರ ಹಾರಿಸುವ ಸಾಮರ್ಥ್ಯ ಹೊಂದಿದೆ. ಸ್ಯಾಟ್-20 ಉಪಗ್ರಹವು ಬರೋಬ್ಬರಿ 4,700 ಕೆ.ಜಿ. ತೂಕವಿರುವುದರಿಂದ ಅದಕ್ಕೆ ಸಹಾಯ ಬೇಕಾಗಿತ್ತು.