ಶಿವಮೊಗ್ಗ : ಕೊರೊನಾ ನಿಯಂತ್ರಣಕ್ಕೆ ಬಂದ ನಂತರವೇ ಶಾಲೆ ಆರಂಭಿಸುವುದು ಸೂಕ್ತ. ಮಕ್ಕಳ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡಬಾರದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹೊರತು ಶಾಲೆಗಳನ್ನು ಓಪನ್ ಮಾಡುವ ಪ್ರಯತ್ನ ನಡೆಸಬಾರದು.
ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿ ಇರುವುದೇ ಒಂದು ದೊಡ್ಡ ದುರಂತ. ಕೊರೊನಾ ಕಡಿಮೆ ಇದ್ದ ಅವಧಿಯಲ್ಲಿ ಎಲ್ಲಾ ಬಂದ್ ಮಾಡಿದರು.
ಸದ್ಯ ಕೊರೊನಾ ಸೋಂಕು ಹೆಚ್ಚಾಗಿದೆ. ಈ ವೇಳೆ ಎಲ್ಲಾ ಓಪನ್ ಮಾಡಿದ್ದಾರೆ. ಕೊರೊನಾದಿಂದಾಗಿ ಜನ ಸಾಯುತ್ತಿದ್ದಾರೆ. ಈಗಿರುವಾಗ ಶಾಲೆ ಆರಂಭದ ಬಗ್ಗೆ ಮಾತನಾಡುತ್ತಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಬಂದ ನಂತರವೇ ಶಾಲೆ ಆರಂಭಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಮುಂದುವರಿದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ರತ್ನಾಕರ್, ಮೊದಲೆಲ್ಲಾ ಕೊರೊನಾ ಹರಡಲು ಮುಸ್ಲಿಮರೇ ಕಾರಣ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.








