ರಾಮನಗರ: ಮುಂಬರುವ ಚುನಾವಣೆಗೂ ನಾನು ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇಲ್ಲಿ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾನು ಕ್ಷೇತ್ರ ಬದಲಿಸುವುದಿಲ್ಲ. ರಾಮನಗರ-ಚನ್ನಪಟ್ಟಣ ನನಗೆ ಎರಡು ಕಣ್ಣುಗಳಿದ್ದಹಾಗೆ. ಜನರು ನಾನು ಮಾಡಿರುವ ಕೆಲಸವನ್ನ ನೋಡಿದ್ದಾರೆ. ನನ್ನ ಮೇಲೆ ಮುಂದೆಯೂ ವಿಶ್ವಾಸ ಇಡುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿಯೆ ಇನ್ನೂ ಆರೋಗ್ಯ ಕಾಪಾಡಿಕೊಂಡಿದ್ದೇನೆ ಎಂದರು.
ಇನ್ನು ನಾನು ಯಾವ ಸರ್ಕಾರವನ್ನೂ ಅಸ್ಥಿರಗೊಳಿಸುವುದಿಲ್ಲ. ನನಗೆ ಈಗ ಅದರ ಅವಶ್ಯಕತೆಯೂ ಇಲ್ಲ. ಯಡಿಯೂರಪ್ಪ ತುಂಬಾ ಶ್ರಮದಿಂದ ಮುಖ್ಯಮಂತ್ರಿ ಆಗಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಗುಂಪುಗಳ ಜೊತೆ ಭಾಗಿಯಾಗಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.








