ಬೆಂಗಳೂರು: ಶನಿವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೂಡ ವ್ಯಾಪಕವಾಗಿ ಮಳೆಯಾಗತ್ತಿದೆ. ಇದರಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಜನರ ಬದುಕು ಕೆಲವೆಡೆ ಬೀದಿಗೆ ಬಂದಿದೆ. ನಗರದ ಬಿನ್ನಿಪೇಟೆಯಲ್ಲಿ ಕಾಂಪೌಂಡ್ ಕುಸಿದಿದ್ದು, 16 ಮನೆಗಳಿಗೆ ಜಲ ದಿಗ್ಬಂಧನ ಉಂಟಾಗಿದೆ. ಹತ್ತಾರು ವಾಹನಗಳು ಹಾಳಾಗಿವೆ.
ಎಡೆಬಿಡದೆ ಸುರಿದ ಮಳೆಗೆ ಕೆ.ಆರ್. ಮಾರ್ಕೆಟ್ನ ರಸ್ತೆಯೆಲ್ಲಾ ಜಲಾವೃತ್ತವಾಗಿತ್ತು. ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತು ಅಕ್ಷರಶಃ ಜನರು ನಲುಗಿ ಹೋಗಿದ್ದಾರೆ. ಹೀಗಾಗಿ ಬೆಂಗಳೂರಿನ ಬಹುತೇಕ ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲ್ಲೆಡೆ ಕಿ.ಮೀಗಟ್ಟಲೆ ಟ್ರಾಫಿಕ್ ಸೃಷ್ಟಿಯಾಗಿತು. ಮಲ್ಲೇಶ್ವರಂ 17 ನೇ ಕ್ರಾಸ್ ಕ್ಲೌಡ್ನೈನ್ ಆಸ್ಪತ್ರೆ ಎದುರು ಬೃಹತ್ ಮರವೊಂದು ಧರೆಗುರುಳಿದೆ.
ಭಾನುವಾರ ಕೂಡ ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಲ್ಲದೇ, ರಾಜ್ಯದ 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ ಅ. 10ರವರೆಗೂ ಭಾರೀ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ.