ಮೂರ್ಖ ಮಾನವನ ಅಭಿವೃದ್ದಿಯೆಂಬೋ ಮುಖವಾಡ; ಕಾಡು ಕೊಳ್ಳೆ ಹೊಡೆದು ಯುದ್ಧ ಸಾರಿದರೇ ಅಂತಿಮ ಜಯ ಪ್ರಕೃತಿಯದ್ದೇ:
ಪ್ರವಾಹ ಉಕ್ಕೇರಿ ಬಂತು ಸಂಕ ತೇಲಿ ಹೋಯ್ತು. ಹೊರಜಗತ್ತಿನೊಂದಿಗೆ ಸಂಪರ್ಕ ಕಡಿತಗೊಂಡು ಮನೆ-ಮಠ ಭೂಮಿ ಒಂದು ವ್ಯವಸ್ಥಿತವಾದ ಬದುಕು ಮೂರಾ ಬಟ್ಟೆಯಾಯಿತು. ಗುಡ್ಡ ಜಾರಿತು, ನಾವು ಅನಾಥರಾದೇವು ನೋಡಿ ಎಂದು ಚಾರ್ಮಾಡಿಯ ನಿವಾಸಿಯೊಬ್ಬರು ನನ್ನ ಹತ್ತಿರ ಅಳಲು ತೋಡಿಕೊಳ್ಳುತ್ತಿದ್ದರು. ಇದಕ್ಕೆಲ್ಲಾ ಕಾರಣ ಈ ಪಾಪಿ ಮಳೆಯೆಂಬ ಸಹಜ ಆಕ್ರೋಶ ಅವರಲ್ಲಿ ಮಡುಗಟ್ಟಿರುತ್ತದೆ. ಇಷ್ಟೆಲ್ಲಾ ಅತಿರೇಕದ ಹಾನಿಯುಂಟಾಗಲು ಮಳೆಯೊಂದೇ ಕಾರಣವಲ್ಲ ಎಂಬ ಸೂಕ್ಷ್ಮ ಅರಿವು ನಮಗಿನ್ನು ತಿಳಿಯುತ್ತಲಿಲ್ಲಾ ಯಾಕೆ.?
ಕರ್ನಾಟಕದಲ್ಲಿ “16 ನೇಯ 1355 ಮೀ” ಎತ್ತರದ ಕೊಡಗಿನ “ಬ್ರಹ್ಮಗಿರಿ” ಬೆಟ್ಟ ಸ್ಥಳೀಯ ಅರ್ಚಕರ ಮನೆಯ ಮೇಲೆ ಕುಸಿದದ್ದು ಅಂತಹ ಆಶ್ಚರ್ಯವೇನಲ್ಲ ಬಿಡಿ. ನಮ್ಮ ಇಡೀ ರಾಜಕೀಯ ವ್ಯವಸ್ಥೆಯೇ ಸಹ್ಯಾದ್ರಿ ಶ್ರೇಣಿಯನ್ನು ಕೊಳ್ಳೆ ಹೊಡೆದ್ದದರ ಪರಿಣಾಮಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ರಾಜ್ಯದಲ್ಲಿ ಪಶ್ಚಿಮಾಭಿಮಖವಾಗಿ ಹರಿಯುವ ನದಿಗಳಾದ ಕಾಳಿ, ನೇತ್ರಾವತಿ, ಅಘನಾಶಿನಿ, ಗಂಗಾವಳಿ, ಶರಾವತಿ, ಮಹದಾಯಿ, ಕಾವೇರಿ, ಕಪಿಲಾ ಮಳೆಗಾಲದಲ್ಲಿ ಮಿತಿಮೀರಿ ಸೊಕ್ಕುವುದೇಕೆ..? ಹಿಂದೆಲ್ಲಾ ಘಟ್ಟದ ಕಣಿವೆ ಕಿಬ್ಬಿಗಳಲ್ಲಿ ಇದಕ್ಕಿಂತ ಹೆಚ್ಚು ಮಳೆ ಸುರಿದರೂ ಯಾವ ಅನಾಹುತವು ಆಗುತ್ತಿರಲಿಲ್ಲ ಆದರೆ ಈಗ..?
ಘಟ್ಟದ ಮೇಲೆ ಮರಗಳನ್ನುವ ಸವರಿ ಜಂಬಿಟ್ಟಿಗೆ ಮಣ್ಣಿನ ರೋಡಿಗೆ ಡಾಂಬರಿನ ಅಲಂಕಾರ ಮಾಡುವಾಗ ರಸ್ತೆ ನಿರ್ಮಿಸಲು ವೈಬ್ರೇಟರ್ ಬಳಕೆ ಮಾಡುವುದರಿಂದ ಗುಡ್ಡ ಕಣಿವೆಗಳು ಸಡಿಲಗೊಳ್ಳುತ್ತಿವೆ. ಹೀಗೆ ದುರ್ಬಲಗೊಂಡ ಗುಡ್ಡಗಳು ಮಳೆಗಾಲದಲ್ಲಿ ಏಕಾಏಕಿ ಕುಸಿದು ಬೀಳುತ್ತೀವೆ ಆದರೂ ನಾವು ಸರ್ಕಾರಗಳನ್ನು ಪ್ರಶ್ನಿಸದೇ, ಹೋರಾಡದೇ ಅನವಶ್ಯಕ ಅವೈಜ್ಞಾನಿಕ ಯೋಜನೆಗಳನ್ನು ಅಭಿವೃದ್ಧಿಯನ್ನು ಯಾವ ಪುರಷಾರ್ಥಕ್ಕೆ ಒಪ್ಪಿಕೊಳ್ಳುತ್ತಿದ್ದೇವೋ ನಾ ಕಾಣೆ.!
ಪ್ರತಿ ವರ್ಷದಂತೆ ಚಾರ್ಮಾಡಿ ಘಾಟಿ ಸಂಪೂರ್ಣ ಬಂದಾಗಿದೆ ಮೊನ್ನೆ ಶಿವಮೊಗ್ಗ ಮಾರ್ಗವಾಗಿ ಕೊಟ್ಟಿಗೆಹಾರಕ್ಕೆ ಪಯಣಿಸುತ್ತಿರುವಾಗ ಘಾಟಿಯ ಆರಂಭ & ಮಧ್ಯದ ತಿರುವಿನಲ್ಲಿ ಗುಡ್ಡ ಸಂಪೂರ್ಣವಾಗಿ ಕುಸಿದು ಹೋಗಿದೆ. ಇಲ್ಲಿ ಅಲೆದಾಡುವಾಗಲೆಲ್ಲಾ ಕರಳು ಕಿತ್ತು ಬರುವಂಥ ಪರಿಸರ ಹಾಳಾದ ದೃಶ್ಯಗಳು ಕಾಣಿಸುತ್ತವೆ, ಇಲ್ಲಿ ಬಿದ್ದ ದೈತ್ಯ ಮರಗಳಿಗೆ ಲೆಕ್ಕವಿಲ್ಲಾ ಅಲ್ಲಲ್ಲಿ ಹಸಿದು ಹಿಸಿದುಕೊಂಡು ಬಿದ್ದಿರುವ ಮಣ್ಣಿನ ಹಸಿ ಗುಡ್ಡೆಗಳು ಅದರಡಿಯಲ್ಲಿ ಸಿಲುಕಿದ ಶವಗಳು ಬಾಯ್ಬಿಟ್ಟ ರಸ್ತೆಗಳು ಮತ್ತು ಸಿಮೆಂಟ್ ಚೀಲದಲ್ಲಿ ಮರಳು ತುಂಬಿ ತಡೆಗೋಡೆ ಕಟ್ಟುವ ಜಿಲ್ಲಾಡಳಿತದ ಬೃಹತ್ ಡ್ರಾಮಾ ಮುಂದಿನ ಮಳೆಗಾಲದವರೆಗೂ ಎಂದಿನಂತೆ ಜಾರಿಯಲ್ಲಿರುತ್ತದೆ.
ಶತಮಾನಗಳಿಂದ ಮುಸಲಧಾರೆಗೆ ವಿಜೃಂಭಿಸುವ ಪಶ್ಚಿಮ ಘಟ್ಟದ ಪ್ರಕೃತಿ ಸರ್ಕಾರದ ಅವೈಜ್ಞಾನಿಕ ಯೋಜನೆಗಳಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದೆ. ಮಂದಿರ, ಮಸೀದಿ ಕಟ್ಟುವಲ್ಲಿ, ಕೆಡುವಲ್ಲಿ ವೀರಾವೇಶ, ರಣೋತ್ಸಾಹ ತೋರಿಸುವ ನಾವುಗಳು ಇಡೀ ಮನುಷ್ಯ ಸಂಕುಲವನ್ನೇ ಕಾಪಾಡುವ ಪ್ರಕೃತಿಯ ಬಗ್ಗೆ ಯಾಕಿಷ್ಟು ಅಸಡ್ಡೆ ಧೋರಣೆ.? ನಮ್ಮನ್ನೆಲ್ಲಾ ಪೊರೆಯುವ ಪ್ರಕೃತಿಗೆ ಇಷ್ಟೆಲ್ಲಾ ಅನ್ಯಾಯವಾದರೂ ನಮ್ಮ ಬದುಕು ಬೀದಿಗೆ ಬಂದರೂ ಅವೈಜ್ಞಾನಿಕ ಯೋಜನೆಗಳ ವಿರುದ್ದ ನಾವು ಧ್ವನಿಯತ್ತದೆ ನರ ಸತ್ತವರಂತೆ ಯಾಕೆ ಬದುಕುತ್ತಿದ್ದಾರೋ ಇಂದಿಗೂ ಅರ್ಥವಾಗುತ್ತಿಲ್ಲ.
“EIA – Environment impact Assessment” (ಪರಿಸರ ಪರಿಣಾಮಗಳ ಮೌಲ್ಯಮಾಪನ)ಗಳಂಥ ನಿಯಮಗಳು ಪ್ರಕೃತಿಯ ಪರವಾಗಿರದೇ ಪ್ರಕೃತಿ ಸಂಪತ್ತನ್ನು ಹಗಲು ದರೋಡೆ ನಡೆಸುವ ಉದ್ಯಮಗಳ ಪರವಾಗಿವೆ, ದೇಶದಲ್ಲಿ ಪರಿಸರ ಕಾನೂನುಗಳನ್ನು ಬಿಗಿಗೊಳಿಸಿ ಅನುಷ್ಠಾನಕ್ಕೆ ತಂದರೆ ಪ್ರಕೃತಿ ಮೊದಲಿನಂತಾಗುತ್ತದೆ, ಕೇಂದ್ರದ ಪರಿಸರ ಅರಣ್ಯ & ಹವಾಮಾನ ಸಚಿವಾಲಯವು ಜನತೆಯ ಕಣ್ಣಿಗೆ ಮಣ್ಣೆರಚುವ ಹಾಗೂ ಆತ್ಮವಂಚನೆಯ ವರದಿಗಳನ್ನು ದೇಶದ ಜನತೆಯ ಮುಂದಿಟ್ಟು ಅದರ ಅನುಷ್ಠಾನಕ್ಕೆ ಸರ್ಕಾರ ಶಂಕುಸ್ಥಾಪನೆ ಮಾಡುವುದನ್ನು ಮೊದಲು ನಿಲ್ಲಿಸಬೇಕು.ಆಗ ಈ ಎಲ್ಲಾ ಪ್ರಕೃತಿ ವಿಕೋಪಗಳು ತಂತಾನೆ ಸರಿ ಹೋಗುತ್ತವೆ. ಅಂತಿಮವಾಗಿ ಗೆಲ್ಲುವುದು ಪ್ರಕೃತಿಯೇ..
ಲೇಖನ:-
ಗಿರಿವಾಲ್ಮೀಕಿ
ವನ್ಯಜೀವಿ ಮತ್ತು ಪರಿಸರ ಹೋರಾಟಗಾರರು