ಆನಂದ್ ಕಟ್ಟಿ… ಕನಸು, ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ನಾನೊಬ್ಬ ಕ್ರಿಕೆಟ್ ಆ ಟಗಾರನಾಗುತ್ತೇನೆ ಎಂದು. ಯಾಕಂದ್ರೆ ಆನಂದ್ ಕಟ್ಟಿಯವರು ಬೆಳೆದು ಬಂದ ವಾತಾವರಣ ಹಾಗಿತ್ತು. 80-90ರ ದಶಕದಲ್ಲಿ ಕ್ರಿಕೆಟ್ ಆಟಗಾರನಾಗಬೇಕು ಅಂದ್ರೆ ಅದು ಬೆಂಗಳೂರಿಗೆ ಹೋಗಬೇಕಿತ್ತು. ಅಷ್ಟೇ ಅಲ್ಲ, ತನ್ನೂರು ಧಾರವಾಡ. ಕ್ರಿಕೆಟ್ ತರಬೇತಿ ಪಡೆಯಬೇಕಾದ್ರೆ ಹುಬ್ಬಳ್ಳಿಗೆ ಬರಬೇಕಿತ್ತು. ಹೀಗಾಗಿ ಎಳವೆಯಲ್ಲಿ ಕ್ರಿಕೆಟ್ ಆಡುತ್ತಿದ್ರೂ ಮುಂದೊಂದು ದಿನ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತೇನೆ, ಭಾರತ ಕ್ರಿಕೆಟ್ ತಂಡದ ಕದ ತಟ್ಟ ತಟ್ಟುತ್ತೇನೆ ಎಂಬ ಯೋಚನೆಯನ್ನು ಕೂಡ ಮಾಡಿರಲಿಲ್ವಂತೆ.
ಹೌದು, ಸಾಕ್ಷಾ ಟಿವಿ ಡಾಟ್ ಕಾಮ್ ನ ಸೂಪರ್ ಓವರ್ ವಿಶೇಷ ಫೇಸ್ ಬುಕ್ ನೇರ ಕಾರ್ಯಕ್ರಮದಲ್ಲಿ ತನ್ನ ಕ್ರಿಕೆಟ್ ಬದುಕಿನ ಹಾದಿ ಹಾಗೂ ತಾನು ಹೇಗೆ ಕ್ರಿಕೆಟ್ ಆಟಗಾರನಾಗಿ ರೂಪುಗೊಂಡೆ, ಯಾರು ಯಾರು ಪ್ರೋತ್ಸಾಹ, ಬೆಂಬಲ, ಪ್ರೇರಣೆ ನೀಡಿದ್ರು ಹೀಗೆ ಹಲವಾರು ಅವಿಸ್ಮರಣೀಯ ಘಟನೆಗಳನ್ನು ಆನಂದ್ ಕಟ್ಟಿಯವರು ನೆನಪಿಸಿಕೊಂಡ್ರು.
ಬಾಲ್ಯದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಆನಂದ್ ಕಟ್ಟಿಯವರು, ಕೈಯಲ್ಲಿ ಲೆದರ್ ಬಾಲ್ ಹಿಡಿದಿರುವ ಹಿಂದೆಯೇ ಒಂದು ರೋಚಕ ಕಥೆ ಇದೆ. ಟೆನಿಸ್ ಬಾಲ್ ನಲ್ಲಿ ಮಧ್ಯಮ ವೇಗಿಯಾಗಿದ್ದ ಕಟ್ಟಿ ಆ ನಂತರ ಲೆದರ್ ಬಾಲ್ ನಲ್ಲಿ ಎಡಗೈ ಲೆಗ್ ಸ್ಪಿನ್ನರ್ ಆಗಿ ರೂಪುಗೊಂಡ್ರು. ಅಷ್ಟೇ ಅಲ್ಲ, ತನ್ನ ಕ್ರಿಕೆಟ್ ಬದುಕಿನ ಆರಂಭದ ದಿನದಲ್ಲಿ ಮನೆಯಲ್ಲೇ ಸ್ಪರ್ಧೆ ನಡೆಯುತ್ತಿತ್ತು. ಯಾಕಂದ್ರೆ ಆನಂದ್ ಕಟ್ಟಿಯವರ ಅಣ್ಣ ಕೂಡ ಕ್ರಿಕೆಟ್ ಆಟಗಾರನಾಗಬೇಕು ಎಂದು ಕನಸು ಕಂಡಿದ್ದರು. ಹೀಗೆ ಒಂದು ದಿನ 16 ವಯೋಮಿತಿ ಕ್ರಿಕೆಟ್ ಟೂರ್ನಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಅದು ವಲಯ ಮಟ್ಟದಲ್ಲಿ. ಆ ಆಯ್ಕೆ ಪ್ರಕ್ರಿಯೆಯಲ್ಲಿ ಆನಂದ್ ಕಟ್ಟಿ ಹಾಗೂ ಅವರ ಅಣ್ಣನೂ ಭಾಗಿಯಾಗಿದ್ದರು. ಕೊನೆಗೆ ಆಯ್ಕೆಯಾಗಿದ್ದು ಆನಂದ್ ಕಟ್ಟಿಯವರು. ಆ ದಿನ ಮನೆಯಲ್ಲೇ ಜೋರಾಗಿಯೇ ಅಣ್ಣ ತಮ್ಮಂದಿರ ನಡುವೆ ಕ್ರಿಕೆಟ್ ಪ್ರೀತಿಯ ಜಗಳವೇ ನಡೆದಿತ್ತು. ನಂತರ ಕಟ್ಟಿಯವರ ಅಣ್ಣ, ತನ್ನ ತಮ್ಮನ ಕ್ರಿಕೆಟ್ ಪ್ರತಿಭೆಗೆ ಬೆನ್ನಲುಬಾಗಿ ನಿಂತರು. ಪ್ರತಿ ಹಂತದಲ್ಲೂ ಕಟ್ಟಿಗೆ ಪ್ರೇರಣೆ, ಸ್ಪೂರ್ತಿಯನ್ನು ನೀಡಿದ್ದರು ಎಂಬುದನ್ನು ಆನಂದ್ ಕಟ್ಟಿಯವರು ಸ್ಮರಿಸಿಕೊಂಡ್ರು.
ಹೀಗೆ 16 ವಯೋಮಿತಿ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾದ ನಂತರ ಕಟ್ಟಿಯವರು ಬೆಂಗಳೂರಿಗೆ ಬರಬೇಕಿತ್ತು. ಕಿರಿಯರ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕಟ್ಟಿಯವರಿಗೆ ಮಲ್ಲೇಶ್ವರಂ ಜಿಮ್ಖಾನದ ಜಗನ್ನಾಥ್ ಅವರು ನೆರವು ನೀಡಿದ್ರು. ತಮ್ಮ ಕ್ಲಬ್ ಪರ ಆಡುವಂತೆ ಆಹ್ವಾನವನ್ನು ಕೂಡ ನೀಡಿದ್ದರು. ಇದೇ ವೇಳೆ ಯುವ ಆಟಗಾರರಿಗೆ ಪ್ರೋತ್ಸಾಹ ನೀಡಲು ಬ್ಯಾಂಕ್ಗಳು ಕೂಡ ಮುಂದೆ ಬರುತ್ತಿದ್ದವು. ಆನಂದ್ ಕಟ್ಟಿಯವರಿಗೆ ಕೆನರಾ ಬ್ಯಾಂಕ್ ಮತ್ತು ಎಸ್ಬಿಎಂ ಬ್ಯಾಂಕ್ಗಳಲ್ಲೂ ಆಹ್ವಾನ ಬಂದಿತ್ತು. ಅಂತಿಮವಾಗಿ ಆನಂದ್ ಕಟ್ಟಿಯವರು ಎಸ್ಬಿಎಂ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಂಡ್ರು. ನಂತರ ಹಿಂತಿರುಗಿ ನೊಡಲೇ ಇಲ್ಲ. ಅದೊಂದು ದಿನ ಊರಿನಲ್ಲಿದ್ದ ಆನಂದ್ ಕಟ್ಟಿಯವರಿಗೆ ರಾತ್ರಿ ವೇಳೆ ಟೆಲಿಗ್ರಾಂ ಬಂದಿತ್ತು, ರಾತ್ರಿ ಟೆಲಿಗ್ರಾಂ ಬಂದ್ರೆ ಏನು ಭಯ ಆಗುತ್ತಾ ಅಂತ ಗೊತ್ತೆ ಇರುತ್ತೆ. ಹಾಗೇ ಭಯದಿಂದ ಟೆಲಿಗ್ರಾಂ ಓದಿರುವ ಕಟ್ಟಿಯವರಿಗೆ ರಾಜ್ಯದ 25 ವಯೋಮಿತಿ ತಂಡಕ್ಕೆ ಆಯ್ಕೆಯಾಗಿದ್ದೇನೆ ಅಂದಾಗ ಆ ರಾತ್ರಿಯೆಲ್ಲಾ ಸಂಭ್ರಮ ಪಟ್ಟಿದ್ರಂತೆ. 25 ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ್ದ ಕಟ್ಟಿಯವರು ರಾಜ್ಯ ರಣಜಿ ತಂಡದ ಕದ ತಟ್ಟಲು ಶುರು ಮಾಡಿದ್ದರು.
ಅದಕ್ಕಿಂತ ಮುಖ್ಯವಾಗಿ ಆನಂದ್ ಕಟ್ಟಿಯವರ ಕ್ರಿಕೆಟ್ ಬದುಕಿಗೆ ಹೊಸ ರೂಪ ಕೊಟ್ಟಿದ್ದೇ ಆ ಒಂದು ಪಂದ್ಯ. ಆತ್ಮವಿಶ್ವಾಸವಿದ್ರೆ ಯಾವ ತಂಡದ ವಿರುದ್ಧವೂ ಆಡಬಹುದು.. ಮಾನಸಿಕವಾಗಿ ಗಟ್ಟಿಯಾಗಿದ್ರೆ ಸಾಕು ಎಂಬುದನ್ನು ಆ ಪಂದ್ಯದಿಂದ ಅರಿತುಕೊಂಡ್ರಂತೆ ಆನಂದ್ ಕಟ್ಟಿಯವರು. ಅದು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯ. ಆ ತಂಡಕ್ಕೆ ರಾಹುಲ್ ದ್ರಾವಿಡ್ ನಾಯಕನಾಗಿದ್ದರು. ಕಟ್ಟಿ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆಗ ರಾಹುಲ್ ದ್ರಾವಿಡ್ ನೀಡಿರುವ ಪ್ರೇರಣೆ, ಪ್ರೋತ್ಸಾಹ ನನ್ನ ಕ್ರಿಕೆಟ್ ಬದುಕಿಗೆ ಹೊಸ ತಿರುವನ್ನೇ ನೀಡಿತ್ತು. ಯಾಕಂದ್ರೆ ರಾಹುಲ್ ನಾಯಕತ್ವ ಆ ರೀತಿಯದ್ದಾಗಿತ್ತು. ನೀನು ನಿನ್ನ ಪಾಡಿಗೆ ಬೌಲಿಂಗ್ ಮಾಡು. ನಿನಗೆ ಯಾವ ರೀತಿ ಫೀಲ್ಡಿಂಗ್ ಬೇಕೋ ಆ ಥರಾ ನಾನು ಮಾಡುತ್ತೇನೆ. ಒಬ್ಬ ನಾಯಕ, ಇನ್ನೂ ಯುವ ಆಟಗಾರರನ ಮೇಲೆ ಇಟ್ಟಿರುವ ನಂಬಿಕೆ ಇದೆಯಲ್ಲಾ ಅದು ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುವಂತೆ ಮಾಡಿತ್ತು. ಆ ಪಂದ್ಯದಲ್ಲಿ ನಾನು ಅತ್ಯುತ್ತಮ ಪ್ರದರ್ಶನ ನೀಡಿದ್ದೆ ಅಂತಾರೆ ಆನಂದ್ ಕಟ್ಟಿ.
ಅಂದ ಹಾಗೇ, ಆನಂದ್ ಕಟ್ಟಿಯವರು ರಣಜಿ ಪಂದ್ಯಕ್ಕೆ ಮುನ್ನವೇ ಇರಾನಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಬಳಿಕ ರಾಜ್ಯ ತಂಡಕ್ಕೆ ಆಯ್ಕೆಯಾದ ಆನಂದ್ ಕಟ್ಟಿಯವರು ಎರಡು ರಣಜಿ ಟ್ರೋಫಿ ವಿಜೇತ ತಂಡದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ರಣಜಿ ಟ್ರೋಫಿ ಪಂದ್ಯಗಳ ಗೆಲುವಿನ ಸ್ಮರಣೀಯ ಘಟನೆಗಳು, ಕೆಲವೊಂದು ಸ್ವಾರಸ್ಯರಕವಾದ ವಿಚಾರಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ. ಅನಿಲ್ ಕುಂಬ್ಳೆಯ ನಾಯಕತ್ವ, ಆ ದಿನಗಳಲ್ಲಿ ಕರ್ನಾಟಕದ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮಥ್ರ್ಯ, ಎದುರಾಳಿ ತಂಡಗಳನ್ನು ಯಾವ ರೀತಿ ಕಟ್ಟಿ ಹಾಕಲು ಮಾಡುತ್ತಿದ್ದ ಪ್ಲಾನ್ಗಳು ಹೀಗೆ ಪ್ರತಿಯೊಂದು ಕ್ಷಣಗಳನ್ನು ಆನಂದ್ ಕಟ್ಟಿಯವರು ನೆನಪು ಮಾಡಿಕೊಳ್ಳುತ್ತಾರೆ.
ಮುಖ್ಯವಾಗಿ ಹೈದ್ರಬಾದ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಯಾವ ರೀತಿ ತಿರುಗೇಟು ನೀಡಿತ್ತು ಎಂಬುದು ಕಟ್ಟಿ ಅವರ ಕ್ರಿಕೆಟ್ ಬದುಕಿನಲ್ಲಿ ಮರೆಯಲಾಗದ ಪಂದ್ಯವಾಗಿದೆಯಂತೆ. ಅಜರುದ್ದೀನ್ ನಾಯಕತ್ವದ ಹೈದ್ರಬಾದ್ ತಂಡ ಬಲಿಷ್ಠವಾಗಿತ್ತು. ಕರ್ನಾಟಕ ತಂಡ ಕೂಡ ಅಷ್ಟೇ ಬಲಿಷ್ಠವಾಗಿತ್ತು. ಆದ್ರೆ ಕೆಲವೊಂದು ಬಾರಿ ಬ್ಯಾಟ್ಸ್ ಮೆನ್ಗಳು ಕೈಕೊಟ್ಟಾಗ ಕೆಳಕ್ರಮಾಂಕದ ಬ್ಯಾಟ್ಸ್ ಮೆನ್ಗಳು ಅಂದ್ರೆ ಬೌಲರ್ಗಳು ಕೂಡ ತಂಡವನ್ನು ಸೋಲಿನಿಂದ ಪಾರು ಮಾಡುತ್ತಿದ್ದರು. ಅಂತವರ ಸಾಲಿನಲ್ಲಿ ಕಟ್ಟಿ ಕೂಡ ಸೇರಿಕೊಳ್ಳುತ್ತಾರೆ. ಹೈದ್ರಬಾದ್ ವಿರುದ್ಧ ಅನಿಲ್ ಕುಂಬ್ಳೆ ಜೊತೆ ಶತಕದ ಜೊತೆಯಾಟವಾಡಿ ಇನಿಂಗ್ಸ್ ಮುನ್ನಡೆ ಸಾಧಿಸಿರುವ ಪಂದ್ಯವನ್ನು ನೆನಪು ಮಾಡಿಕೊಂಡ್ರು.
ಆ ಪಂದ್ಯಗಳಲ್ಲಿ ಆನಂದ್ ಕಟ್ಟಿಯವರು 48 ಎಸೆತಗಳಲ್ಲಿ ಒಂದು ರನ್ ಕೂಡ ದಾಖಲಿಸಲಿಲ್ಲ. ಆದ್ರೆ 49 ಎಸೆತದಲ್ಲಿ ಬೌಂಡರಿ ಹೊಡೆದಾಗ ಅನಿಲ್ ಕುಂಬ್ಳೆ ಕೂಡ ಅಚ್ಚರಿಗೊಂಡಿದ್ರಂತೆ. ಆನಂತರ ಅನಿಲ್ ಜೊತೆ ಕಟ್ಟಿಯವರ ಜೊತೆಯಾಟ ಹೈದ್ರಬಾದ್ ತಂಡಕ್ಕೆ ದೊಡ್ಡ ತಲೆನೋವಾಗಿ ಹೋಗಿತ್ತಂತೆ. ಇನ್ನೇನೂ ಇನಿಂಗ್ಸ್ ಮುನ್ನಡೆ ಗಳಿಸಲು ಏಳು ರನ್ಗಳು ಬೇಕಿರುವ ಆನಂದ್ ಅವರು ಮುಂದೆ ಬಂದು ಬೌಂಡರಿ ಸಿಡಿಸಿದ್ರಂತೆ. ಆಗ ಕುಪಿತಗೊಂಡ ಅನಿಲ್ ಸ್ವಲ್ಪ ರೇಗಾಡಿದ್ರಂತೆ. ಆದ್ರೆ ಆ ಪಂದ್ಯದಲ್ಲಿ ತಾನು ಅಜೇಯ ಆಟಗಾರನಾಗಿ ಉಳಿಯಬೇಕು ಎಂದು ಮೊದಲೇ ತೀರ್ಮಾನ ಮಾಡಿದ್ದ ಆನಂದ್ ಕಟ್ಟಿಯವರು ಜಿದ್ದಿಗೆ ಬಿದ್ದು ಆಡಿದ್ದರು.
ಅಷ್ಟೇ ಅಲ್ಲ, ಆ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಶತಕ ಸಿಡಿಸಿ ಔಟಾಗಿದ್ದರು. ಅಂತಿಮವಾಗಿ ಅಜೇಯರಾಗಿ ಪೆವಿಲಿಯನ್ಗೆ ಹಿಂತಿರುಗಿದ್ದಾಗ ಆನಂದ್ ಕಟ್ಟಿಯವರಿಗೆ ಅಚ್ಚರಿಯಾಗಿತ್ತು. ಒಂದು ಕಡೆ ರಾಹುಲ್, ಮತ್ತೊಂದು ಕಡೆ ಅನಿಲ್ ಕುಂಬ್ಳೆ ಸೇರಿದಂತೆ ತಂಡದ ಎಲ್ಲಾ ಆಟಗಾರರು ಆನಂದ್ ಕಟ್ಟಿಯವರಿಗೆ ಚಪ್ಪಾಳೆ ತಟ್ಟಿ ಬರಮಾಡಿಕೊಂಡ್ರಂತೆ. ಇದು ನನ್ನ ಕ್ರಿಕೆಟ್ ಬದುಕಿನ ಮತ್ತೊಂದು ಅವಿಸ್ಮರಣೀಯ ಕ್ಷಣ ಅಂತ ಖುಷಿಯಿಂದಲೇ ಹೇಳಿಕೊಂಡ್ರು.
ಅದೇ ರೀತಿ ರಣಜಿ ಟೂರ್ನಿಯ ಇನ್ನೊಂದು ಸೆಮಿಫೈನಲ್ ಪಂದ್ಯ. ಅದು ಪಂಜಾಬ್ ವಿರುದ್ಧದ ಪಂದ್ಯವಾಗಿತ್ತು. ತವರಿನಲ್ಲಿ ಆಡುತ್ತಿದ್ದ ಪಂಜಾಬ್ ತಂಡ ಯಶಸ್ಸಿನ ಆಮಲಿನಲ್ಲಿ ತೇಲಾಡಿತ್ತು. ಅದಕ್ಕೆ ತಕ್ಕಂತೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿದ್ದ ಪಂಜಾಬ್ ಉತ್ತಮ ಸ್ಥಿತಿಯಲ್ಲಿತ್ತು. ಆಗ ದೊಡ್ಡಗಣೇಶ್ ಮತ್ತು ನವಜೋತ್ ಸಿಂಗ್ ಸಿದೂ ನಡುವೆ ಸಣ್ಣ ಮಾತಿನ ಚಕಮಕಿ ನಡೆಯಿತ್ತು. ಆ ನಂತರ ದೊಡ್ಡಗಣೇಶ್ ರಕ್ಕಸನಂತೆ ಬೌಲಿಂಗ್ ಮಾಡಿ ಪಂಜಾಬ್ ತಂಡದ ಸೋಲಿಗೆ ಮುನ್ನುಡಿ ಬರೆದಿದ್ದರು. ಹಾಗೇ ಬ್ಯಾಟಿಂಗ್ ನಲ್ಲಿ ತಿಲಕ್ ನಾಯ್ಡು ಸ್ಫೋಟಕ ಶತಕ ಸಿಡಿಸಿದ್ದರು. ದೊಡ್ಡ ಗಣೇಶ್ ಮತ್ತು ತಿಲಕ್ ನಾಯ್ಡು ಇಬ್ಬರು ಕರ್ನಾಟಕ ಕ್ರಿಕೆಟ್ ನ ಊಹೆ ಮಾಡಲಾಗದ ಆಟಗಾರರು. ಅವರಿಬ್ಬರ ಸ್ವಭಾವ, ಜಿದ್ದಿಗೆ ಆಡುತ್ತಿದ್ದ ರೀತಿ ಎಲ್ಲವೂ ಅದ್ಭುತವಾಗಿತ್ತು ಎಂದು ಹೇಳ್ತಾರೆ ಕಟ್ಟಿ.
ಇನ್ನು ನಿಮ್ಮ ಬೆಸ್ಟ್ ಕ್ಯಾಪ್ಟನ್ ಯಾರು ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ಆನಂದ್ ಕಟ್ಟಿಯವರು, ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅಂತಾರೆ. ಯಾಕಂದ್ರೆ ಇಬ್ಬರದ್ದು ವಿಭಿನ್ನ ವ್ಯಕ್ತಿತ್ವ. ಅನಿಲ್ ತುಂಬಾನೇ ಶಿಸ್ತು, ಅಷ್ಟೇ ಪ್ರೋತ್ಸಾಹವನ್ನು ನೀಡುತ್ತಿದ್ದರು. ಆಟಗಾರನಿಗೆ ಡಿಮ್ಯಾಂಡ್ ಮಾಡುತ್ತಿದ್ದರು. ನೀನು ವಿಕೆಟ್ ತೆಗೆಯಬೇಕು. ನಿನ್ನಲ್ಲಿ ಅಂತಹ ಸಾಮಥ್ರ್ಯವಿದೆ ಎಂಬುದನ್ನು ಮನವರಿಕೆ ಮಾಡುತ್ತಿದ್ದರು. ಅದೇ ರೀತಿ ರಾಹುಲ್ ದ್ರಾವಿಡ್ ಎಲ್ಲವನ್ನೂ ತಮಗೆ ಬಿಟ್ಟುಕೊಡುತ್ತಿದ್ದರು. ಅದಕ್ಕೆ ತಕ್ಕಂತೆ ಪ್ಲಾನ್ ಮಾಡುತ್ತಿದ್ದರು. ಆಟಗಾರನ ಪ್ರತಿಭೆ, ಸಾಮಥ್ರ್ಯವನ್ನು ಅರಿತುಕೊಳ್ಳುವ ಗುಣ ಇಬ್ಬರಲ್ಲೂ ಇತ್ತು ಎಂಬುದು ಆನಂದ್ ಕಟ್ಟಿಯವರ ಅಭಿಮತ.
ದೇಸಿ ಕ್ರಿಕೆಟ್ ನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಟೀಮ್ ಇಂಡಿಯಾಗೆ ಆಡಿಲ್ಲ ಅನ್ನೋ ಕೊರಗು ಕಾಡುತ್ತಿದೆಯಲ್ವಾ ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ಆನಂದ್ ಕಟ್ಟಿ, ಹೌದು ಅಂತಾರೆ. ಎಲ್ಲೋ ಒಂದು ಕಡೆ ಟೀಮ್ ಇಂಡಿಯಾಗೆ ಆಡಬಹುದಿತ್ತು. ಆದ್ರೆ ಅವಕಾಶ ಸಿಗಲಿಲ್ಲ. ಒಂದು ಬಾರಿ ರಾಹುಲ್ ದ್ರಾವಿಡ್ ಸಣ್ಣ ಸುಳಿವು ನೀಡಿದ್ದರು. ಆದ್ರೆ ನನಗೆ ಅದೃಷ್ಟವಿಲ್ಲ. ಆ ಟೈಮ್ ನಲ್ಲಿ ಟೀಮ್ ಇಂಡಿಯಾದೊಳಗೆ ಎಂಟ್ರಿಯಾಗುವುದು ತುಂಬಾನೇ ಕಷ್ಟವಾಗುತ್ತಿತ್ತು. ಆದ್ರೂ ದೇಸಿ ಕ್ರಿಕೆಟ್ ನಲ್ಲಿ ನಾನು ಮಾಡಿರುವ ಸಾಧನೆ, ನನಗೆ ಸಿಕ್ಕ ಖ್ಯಾತಿ, ಅಷ್ಟೇ ಅಲ್ಲ ಒಂದು ಸಣ್ಣ ನಗರದ ಹುಡುಗ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿರುವ ಬಗ್ಗೆ ನನಗೆ ಹೆಮ್ಮೆ ಇದೆ ಅಂತ ಹೆಮ್ಮೆಯಿಂದಲೇ ಹೇಳಿಕೊಳ್ತಾರೆ ಕಟ್ಟಿ.
ಇನ್ನು ಕೆಪಿಎಲ್ ಮತ್ತು ಅಸ್ಸಾಂ ರಣಜಿ ತಂಡದ ಪರ ಆಡಿರುವುದು ಕೂಡ ಖುಷಿಕೊಟ್ಟಿದೆ. ಅಸ್ಸಾಂ ತಂಡದ ಪರ ಆಡುವಾಗ ತನ್ನ ಪತ್ನಿ, ಮಕ್ಕಳು, ಮನೆಯವರ ತ್ಯಾಗವನ್ನು ನೆನಪಿಸಿಕೊಳ್ತಾರೆ. ಅಸ್ಸಾಂ ಪರ ಸುಮಾರು ನಾಲ್ಕೈದು ವರ್ಷ ಆಡಿದ್ದೆ. ಆಗ ಮನೆಯವರಿಗೆ ಭಯವಿತ್ತು. ಅಲ್ಲಿನ ವಾತಾವರಣ ಅಷ್ಟೊಂದು ಸರಿ ಇರಲಿಲ್ಲ. ಆದ್ರೂ ನಮ್ಮಿಂದಾಗಿ ಅಸ್ಸಾಂ ತಂಡಕ್ಕೆ ಸ್ವಲ್ಪ ಮಟ್ಟಿನ ನೆರವು ಆಯ್ತಲ್ಲ ಅನ್ನೋ ತೃಪ್ತಿ ಇದೆ. ಆಗ ಸನತ್ ನಮಗೆ ಕೋಚ್ ಆಗಿದ್ದರು. ಇನ್ನು ಕೆಪಿಎಲ್ ಟೂರ್ನಿ. ಒಂದು ಬಾರಿ ವಿನ್ನರ್, ಮತ್ತೊಂದು ಬಾರಿ ರನ್ನರ್ ಅಪ್ ಆಗಿರುವ ಖುಷಿ ಇದೆ. ಅದ್ರಲ್ಲೂ ಪ್ರಾವಿಡೆಂಟ್ ತಂಡದ ಮಾಲೀಕರು ತನ್ನ ಮೇಲಿಟ್ಟಿರುವ ಪ್ರೀತಿ, ನಂಬಿಕೆಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಸ್ವಲ್ಪ ಭಾವುಕರಾಗಿಯೇ ಹೇಳಿದ್ರು.
ಕೆಪಿಎಲ್ ಫೈನಲ್ ನಲ್ಲಿ ನಾನು ಗಾಯಗೊಂಡಿದ್ದೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಯ್ತು. ಆಗ ನನ್ನ ನೆರವಿಗೆ ನಿಂತವರು ಪ್ರಾವಿಡೆಂಟ್ ಫ್ರಾಂಚೈಸಿ. ನನ್ನ ಇಡೀ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದು ಪ್ರಾವಿಡೆಂಟ್ ಮಾಲೀಕರು. ಜೊತೆಗೆ ನಾನು ಡಿಸ್ಚಾರ್ಜ್ ಆಗುವ ವೇಳೆ ನಾನು ಯೋಚನೆ ಮಾಡದಂತಹ ಹೂಗುಚ್ಛವನ್ನು ಆಸ್ಪತ್ರೆಗೆ ತಂದಿದ್ದರು. ಅವರ ಪ್ರೀತಿ, ನಂಬಿಕೆ ನನ್ನ ಮನದಲ್ಲಿ ಸದಾ ಇರುತ್ತೆ ಅಂತ ಹೇಳಿದ್ರು.
ಇದೇ ವೇಳೆ ತನಗೆ ಬೆಂಬಲ, ಪ್ರೇರಣೆ ನೀಡಿದ್ದ ಎಲ್ಲಾ ಆಟಗಾರರು ಹಾಗೂ ಸ್ಟಾಫ್, ಕೋಚ್, ಕೆಎಸ್ಸಿಎ, ಫಿಸಿಯೋ, ತರಬೇತುದಾರರನ್ನು ಸ್ಮರಿಸಿಕೊಂಡ್ರು ಆನಂದ್ ಕಟ್ಟಿ. ಒಟ್ಟಿನಲ್ಲಿ ಆನಂದ್ ಕಟ್ಟಿ ಅನ್ನೋ ಸೌಮ್ಯ ಸ್ವಭಾವದ ಆಟಗಾರನ ಕ್ರಿಕೆಟ್ ಬದುಕನ್ನು ಸಿಂಹಾವಲೋಕನ ಮಾಡಿಕೊಂಡಾಗ ಅಚ್ಚರಿಯೂ ಆಗುತ್ತೆ. ಥ್ಯಾಂಕ್ಯೂ ಆನಂದ್ ಕಟ್ಟಿ.
ಸನತ್ ರೈ








