ಕೊರೋನಾ ಸೋಂಕಿನ ದಾಳಿಗೆ ಅಕ್ಷರಶಃ ಮರಣಕೂಪವಾಗಿರುವ ಇಟಲಿಯಲ್ಲಿ, ವೈದ್ಯ ಲೋಕಕ್ಕೆ ಭರವಸೆಯ ಬೆಳಕೊಂದು ಮೂಡಿದೆ. ಕೊರೋನಾ ಸೋಂಕು ಹಿರಿಯ ನಾಗರಿಕರಿಗೆ ಮಾರಣಾಂತಿಕ ಎಂಬ ಅಭಿಪ್ರಾಯಗಳ ನಡುವೆ 101 ವರ್ಷದ ಮಿ| ಪಿ ಕೊರೊನಾ ವೈರಸ್ ಸೋಂಕಿನ ಎದುರು ಗೆದ್ದು, ವೈದ್ಯ ಲೋಕಕ್ಕೆ ಹೊಸ ಹುರುಪು ತುಂಬಿದ್ದಾರೆ.
ಮಿ| ಪಿ ಅವರು ಮಾರಣಾಂತಿಕ ಕೋವಿಡ್-19 ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ವೈರಸ್ ಸೋಂಕಿನಿಂದ ಬದುಕುಳಿಯುವ ಭರವಸೆ ಇಲ್ಲ ಎನ್ನುವ ಕಾರಣಕ್ಕೆ ಇಟಲಿಯಲ್ಲಿ 80 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನಿರಾಕರಿಸಲಾಗುತ್ತಿದೆ. ಆದರೆ ಇದರ ಮಧ್ಯೆ ಇಟಲಿಯ ಆಸ್ಪತ್ರೆಯಲ್ಲಿ ಹಾಸಿಗೆ ಪಡೆದ, 101 ವರ್ಷ ಪ್ರಾಯದ ಮಿ| ಪಿ, ಕೋವಿಡ್ 19 ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸಿದ್ದಾರೆ.
ಇಟಲಿಯ ಆಸ್ಪತ್ರೆಯಲ್ಲಿ 80 ವರ್ಷ ಮೇಲ್ಪಟ್ಟ ಸೋಂಕುಪೀಡಿತ ರಿಗೆ ಚಿಕಿತ್ಸೆ ನೀಡುವುದಿಲ್ಲ. ಆದರೆ ಮಿ| ಪಿ ಶತಾಯುಷಿಯಾಗಿದ್ದರಿಂದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಮತ್ತು ವಿಶೇಷ ಮುತುವರ್ಜಿಯಿಂದ ಚಿಕಿತ್ಸೆ ನೀಡಲಾಯಿತಂತೆ. ಈಗ ಮಿ| ಪಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ರಿಮಿನಿ ನಗರದಲ್ಲಿರುವ ತಮ್ಮ ಮನೆಗೆ ವಾಪಸಾಗಿದ್ದಾರೆ.
ಪ್ರತಿದಿನ ಸಾವಿನ ಸುದ್ದಿಗಳನ್ನೇ ಪ್ರಸಾರ ಮಾಡುತ್ತಿದ್ದ ಅಲ್ಲಿನ ಮಾಧ್ಯಮಗಳು ಇದೀಗ ಮಿ| ಪಿ, ಕೋವಿಡ್ 19 ಸೋಂಕಿನ ವಿರುದ್ಧ ಗೆದ್ದ ಸಂಭ್ರಮದ ಸುದ್ದಿಯನ್ನು ಪ್ರಸಾರ ಮಾಡುವುದರಲ್ಲಿ ನಿರತವಾಗಿದೆ.
101 ವರ್ಷದ ವೃದ್ಧರೊಬ್ಬರು ಪೂರ್ಣವಾಗಿ ಗುಣಮುಖರಾಗಿರುವುದು ಕೋವಿಡ್ 19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುವವರಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ ಮತ್ತು ವೈದ್ಯಕೀಯ ಲೋಕಕ್ಕೆ ಹೊಸ ಚೈತನ್ಯ ಉಂಟು ಮಾಡಿದೆ.








