“ಕಾಂಗ್ರೆಸ್ ಪಕ್ಷಕ್ಕೆ ಇದು ಯುದ್ಧದ ಸಮಯ” : ಸಿ.ಎಂ ಇಬ್ರಾಹಿಂ
C. M. Ibrahimಬೆಂಗಳೂರು ; ಕೊರೊನಾ ಸಂಕಷ್ಟದ ನಡುವೆ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚುಟುವಟಿಕೆಗಳು ಆರಂಭವಾಗಿದ್ದು, ವಿಧಾನ ಪರಿಷತ್ ಟಿಕೆಟ್ ಗಾಗಿ ಮೂರು ಪಕ್ಷಗಳಲ್ಲಿ ಭಾರಿ ಲಾಬಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೂ ಪರಿಷತ್ ಚುನಾವಣೆ ವಿಚಾರವಾಗಿ ಭಾರಿ ಚಟುವಟಿಕೆಗಳು ನಡೆಯುತ್ತಿದ್ದು, ಎಂಎಲ್ ಸಿ ಆಕಾಂಕ್ಷಿಗಳ ಪರ ಕೆಲ ನಾಯಕರು ಬ್ಯಾಟ್ ಬೀಸುತ್ತಿದ್ದಾರೆ.
ಇನ್ನು ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ ಇಬ್ರಾಹಿಂ ಅವರು ಭೇಟಿ ಮಾಡಿ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ಕಾಲ, ಶಾಂತಿ ಕಾಲ ಎಂದು ಎರಡು ವಿಧಗಳಿರುತ್ತವೆ. ಸರ್ಕಾರ ಇದ್ದಾಗ ಶಾಂತಿಯ ಕಾಲ. ಆಗ ಜಾತಿ, ಸಾಮಾಜಿಕ ನ್ಯಾಯ ಪಾಲನೆ ಮಾಡಿದರೂ ನಡೆಯುತ್ತದೆ. ಆದರೆ ಮುಂದೆ ಚುನಾವಣೆ ಎದುರಾಗಲಿದೆ. ಅಂದ್ರೆ ಕಾಂಗ್ರೆಸ್ ಪಕ್ಷಕ್ಕೆ ಇದು ಯುದ್ಧದ ಸಮಯ, ಹಾಗಾಗಿ ಯುದ್ಧಕ್ಕೆ ಹೋಗುವವರನ್ನು ವಿಧಾನ ಪರಿಷತ್ ಗೆ ನೇಮಕ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಜನಸಾಮಾನ್ಯರ ನಡುವೆ ಹೋಗುವವರು, ಕಾಂಗ್ರೆಸ್ ಸಿದ್ಧಾಂತಗಳನ್ನು ತಲುಪಿಸುವವರಿಗೆ ಎಂಎಲ್ ಸಿ ಟಿಕೆಟ್ ಸಿಗಬೇಕು ಎಂದ ಇಬ್ರಾಹಿಂ, ರಾಜ್ಯ ನಾಯಕರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಗೆ ಕಳುಹಿಸುತ್ತಾರೆ. ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಇದೇ ವೇಳೆ ಬಿಎಸ್ ಯಡಿಯೂರಪ್ಪ ಬಗ್ಗೆ ಮಾತನಾಡಿದ ಇಬ್ರಾಹಿಂ, ಬಿಜೆಪಿಯಲ್ಲಿ ಒಳಜಗಳ ಹೆಚ್ಚಾಗಿದೆ. ರಾಜ್ಯಸಭೆ ಚುನಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು ಮಾಡುವ ಹೆಸರನ್ನು ಪರಿಗಣಿಸುವುದು ಸತ್ ಸಂಪ್ರದಾಯ. ಆದರೆ ಬಿಜೆಪಿ ಹೈಕಮಾಂಡ್ ಇತ್ತೀಚೆಗೆ ಏನು ಮಾಡಿದೆ ಎಂದು ಗೊತ್ತಿದೆ. ವರಿಷ್ಠರು ನನ್ನನ್ನು ಕೇಳಿದರು ಎಂದು ಯಡಿಯೂರಪ್ಪ ಹೇಳಿಕೊಂಡಿದ್ದಾರೆ, ಆ ರೀತಿ ಹೇಳಲೇಬೇಕು. ದೇವರು ಯಡಿಯೂರಪ್ಪನವರಿಗೆ ಒಳ್ಳೆಯದು ಮಾಡಲಿ ಎಂದರು