ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರೋತ್ಸವ
ಜಮ್ಮು&ಕಾಶ್ಮೀರ : ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ ಜೂನ್ 15ರಿಂದ 20ರವರೆಗೆ ರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗುತ್ತಿದೆ.
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಕೇಂದ್ರ ಮಾಹಿತಿ, ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಜಮ್ಮು ಮತ್ತು ಕಾಶ್ಮೀರ ಚಲನಚಿತ್ರ ಅಭಿವೃದ್ಧಿ ಮಂಡಳಿಯು ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿನ ಚಲನಚಿತ್ರ, ಸಂಗೀತ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವುದು ಈ ಚಲನಚಿತ್ರೋತ್ಸವದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಾಗೇ ಕಾಶ್ಮೀರದ ನೈಸರ್ಗಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸೌಂದರ್ಯವನ್ನು ಭಾರತದ ಇತರ ಭಾಗಗಳಿಗೆ ಮತ್ತು ಪ್ರಪಂಚಕ್ಕೆ ತೋರಿಸುವ ಉದ್ದೇಶವಾಗಿದೆ. ಇನ್ನೂ ಚಲನಚಿತ್ರೋತ್ಸವದಲ್ಲಿ ಫೀಚರ್ ಫಿಲ್ಮ್‌ಗಳು, ನಾನ್-ಫೀಚರ್ ಫಿಲ್ಮ್‌ಗಳು ಮತ್ತು ಮ್ಯೂಸಿಕ್ ವಿಡಿಯೋಗಳು ಎಂಬ ಮೂರು ವಿಭಾಗಗಳಲ್ಲಿ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಭಾರತೀಯ ಚಲನಚಿತ್ರ ನಿರ್ಮಾಪಕರು ಮತ್ತು ಸಂಗೀತ ನಿರ್ಮಾಪಕರು, ಕಲಾವಿದರನ್ನು ಇಲ್ಲಿಗೆ ಆಹ್ವಾನಿಸಲಾಗಿದೆ. ಇವರು ತಮ್ಮ ಸಿನಿಮಾ, ಸಾಕ್ಷ್ಯಚಿತ್ರ, ಒಟಿಟಿ ಚಲನಚಿತ್ರ ಅಥವಾ ಕಿರುಚಿತ್ರಗಳು ಮತ್ತು ಸಂಗೀತ ವಿಡಿಯೋಗಳನ್ನು ಇಲ್ಲಿ ಪ್ರದರ್ಶಿಸಬಹುದು.
ಪ್ರಶಸ್ತಿ ಸಮಾರಂಭದಲ್ಲಿ 40ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಲಾಗುವುದು ಮತ್ತು ವಿಜೇತರು ಪ್ರಮಾಣ ಪತ್ರ ಅಥವಾ ಪದಕದ ಜೊತೆಯಲ್ಲಿ ನಗದನ್ನು ಸ್ವೀಕರಿಸುತ್ತಾರೆ. ಪ್ರಶಸ್ತಿಗಳು ಮತ್ತು ಬಹುಮಾನಗಳ ಪಟ್ಟಿ, ನಿಯಮಗಳನ್ನು https://filmfreeway.com/nffjk ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನಾಂಕವಾಗಿದೆ.








