ಜಗದೋದ್ಧಾರನ.. ಆಡಿಸಿದಳೆಶೋದಾ ಜಗದೋದ್ಧಾರನ
ಮಂಗಳೂರು, ಅಗಸ್ಟ್ 11: ಕೊಳಲನೂದುತ್ತಾ ಬಂದ ಮುದ್ದು ಕೃಷ್ಣ ಜಗತ್ತಿನ ಜನರನ್ನೆಲ್ಲಾ ತನ್ನ ಕಡೆಗೆ ಸೆಳೆದವ. ಆತನ ಆಕರ್ಷಣೆಯ ಚುಂಬಕ ಶಕ್ತಿಗೆ ಮಾರು ಹೋಗದವರಿಲ್ಲ. ದೇವಕಿಯ ಮುದ್ದು ಕಂದ ಯಶೋಧೆಯ ಕೃಷ್ಣನಾಗಿ ವೃಂದಾವನದ ಗೋಪಿಕೆಯರ ಮಾನಸ ಚೋರನಾಗಿ ಧರ್ಮವನ್ನು ಎತ್ತಿ ಹಿಡಿದು ಜಗತ್ತಿಗೆ ಗೀತೆಯ ಸಾರವನ್ನು ಬೋಧಿಸಿದ ಆಚಾರ್ಯ.

ಕೃಷ್ಣಾಷ್ಟಮಿಯ ಹಬ್ಬವೆಂದರೆ ಅದು ಎಳೆಯರ ಹಬ್ಬ. ತಮ್ಮ ಮಗುವನ್ನು ಕೃಷ್ಣನನ್ನಾಗಿಸಿ ಸಂಭ್ರಮಿಸುವ ಯಶೋಧೆಯರ ಹಬ್ಬ. ಕೃಷ್ಣನ ತುಂಟಾಟಗಳಲ್ಲಿ, ಬಾಲಲೀಲೆಗಳಲ್ಲಿ ತಮ್ಮ ಕಂದನನ್ನು ಕಾಣುತ್ತಾ ಕೃಷ್ಣನಂತೆ ತಮ್ಮ ಮಗುವನ್ನು ಅಲಂಕರಿಸಿ ಮನತುಂಬಿಸಿ ಕೊಳ್ಳುವ, ಕಣ್ಣಿಗೆ ಹಬ್ಬವನ್ನಾಗಿಸುವ ಹೆತ್ತವರ ಸಂಭ್ರಮ.. ಅಬಾಲವೃದ್ದರಾದಿಯಾಗಿ ಸರ್ವರೂ ಮೊಸರು ಕುಡಿಕೆಯ ಹಬ್ಬದಲ್ಲಿ ಸಂಭ್ರಮಿಸುತ್ತಾರೆ.
ಬಾಲಕೃಷ್ಣನ ತುಂಟತನ, ಬಾಲಲೀಲೆಗಳು ದಾಸರ ಹಾಡುಗಳಲ್ಲಿ ಅನಾವರಣಗೊಂಡಿದ್ದು, ಅವನ ತುಂಟಾಟವನ್ನು ಕಣ್ಣ ಮುಂದೆ ಬಿಚ್ಚಿಡುತ್ತದೆ.

ಜಗದೋಧ್ದಾರಕನ ಆಡಿಸಿದಳೇ ಯಶೋದೆ ಕೀರ್ತನೆಯಲ್ಲಿ ಭಗವಂತನನ್ನು ತನ್ನ ಮಗುವೆಂದು ಪ್ರೀತಿಯಿಂದ ಮುದ್ದಾಡಿದ ಯಶೋಧೆಯನ್ನು ದಾಸರು ವರ್ಣಿಸುತ್ತಾರೆ. ತುಂಟಾಟದ ಕೃಷ್ಣನಿಗೆ ಯಶೋಧೆಯು ಗುಮ್ಮನನ್ನು ಕರೆಯುವುದಾಗಿ ಹೆದರಿಸಿದರೆ, ಆ ತಾಯಿಯನ್ನು ತನ್ನ ಮುದ್ದು ಮಾತುಗಳಿಂದ ಗುಮ್ಮನ ಕರೆಯದಿರೆ ಅಮ್ಮ ನೀವು ಗುಮ್ಮನ ಕರೆಯದಿರೆ ಎನ್ನುತ್ತಾ ಆಕೆಯನ್ನು ಮರಳು ಮಾಡುತ್ತಾ ಮನಗೆಲ್ಲುತ್ತಾನೆ. ಕೃಷ್ಣನ ತುಂಟತನ ಕುರಿತು ಗೋಪಿಕಾ ಸ್ತ್ರೀ ಯರು ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯಾ.. ಮಾಡುತ್ತಾನೆ ಮನೆಗೆ ಬಂದು ಬಹಳ ಚೇಷ್ಟೆಯಾ.. ಎಂದು ಕೊಡುವ ದೂರುಗಳನ್ನು ದಾಸರು ತಮ್ಮ ಕೀರ್ತನೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಮಗನನ್ನು ಮನೆಯೊಳಗಾಡೊ ಗೋವಿಂದ,
ನೀನು ನೆರೆಮನೆಗಳಿಗೆ ಪೋಗುವುದೇನು ಚಂದ ಎಂದು ತಾಯಿ ತನ್ನ ಮಗನಿಗೆ ಪ್ರೀತಿಯಿಂದ ಹೇಳುವ ಬುದ್ದಿಮಾತು ತಾಯಿಯ ಮನಸ್ಸಿನ ಭಯವನ್ನು ವ್ಯಕ್ತ ಪಡಿಸುತ್ತದೆ.

ಜನಪದ ತಾಯಿಯೊಬ್ಬಳು ತನ್ನ ಕಂದನ ಕುರಿತು ಆಡು ಬಾ ನನ್ನ ಕಂದ ಅಂಗಾಲ ತೊಳೆದೇನು.. ತೆಂಗಿನಕಾಯಿ ತಿಳಿನೀರು…
ತೆಂಗಿನಕಾಯಿ ತಿಳಿನೀರು ತಕ್ಕೊಂಡು.. ಬಂಗಾರ ಮಾರಿ ತೊಳೆದೆನಾ.. ಎಂಬ ಹಾಡಿನಲ್ಲಿ ಮಕ್ಕಳ ಆಟಪಾಟಗಳು ತಾಯಿಗೆ ಕೊಡುವ ಸಂತೋಷವನ್ನು ವ್ಯಕ್ತಪಡಿಸಿದರೆ, ಯಶೋಧೆಯು ಕೃಷ್ಣನ ತುಂಟಾಟದಿಂದ ಹೊರತಾಗುವುದು ಹೇಗೆ ಸಾಧ್ಯ.
ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ? ಎಲ್ಲಿ ನೋಡಿದರಲ್ಲಿ ಕಾಣುವ ಕೃಷ್ಣ ಈ ಕೃಷ್ಣಾಷ್ಟಮಿಯಂದು ನಮ್ಮೆಲ್ಲರ ಮನೆ ಮನಸ್ಸುಗಳಲ್ಲಿ ನೆಲೆಸಲಿ. ಕೊರೋನಾ ಎನ್ನುವ ದೈತ್ಯನ ಸಂಹಾರ ಮಾಡಿ ತನ್ನೆಲ್ಲಾ ಭಕ್ತರಿಗೆ ನೆಮ್ಮದಿಯನ್ನು ನೀಡಲಿ ಎಂದು ಹಾರೈಸೋಣ.
ಸಾಕ್ಷಟಿವಿ.ಕಾಮ್ ವತಿಯಿಂದ ಓದುಗರಿಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು








