ಶಿವಯೋಗ ಮಂದಿರ ಸಂಸ್ಥೆಗೆ ಅಧ್ಯಕ್ಷರಾಗಿ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಯ್ಕೆ
ಬಾಗಲಕೋಟೆ: ಶಿವಯೋಗಮಂದಿರ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಹುಬ್ಬಳ್ಳಿ ಮೂರು ಸಾವಿರಮಠದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ ಆಯ್ಕೆಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನಲ್ಲಿರುವ ಶಿವಯೋಗಮಂದಿರ ಸಂಸ್ಥೆಗೆ ಉಪಾಧ್ಯಕ್ಷರಾಗಿ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀ ಆಯ್ಕೆಯಾಗಿದ್ದಾರೆ. ಶಿವಯೋಗಮಂದಿರದಲ್ಲಿ ವಿವಿಧ ವೀರಶೈವಲಿಂಗಾಯತ ಮಠಾಧೀಶರು, ಟ್ರಸ್ಟಿಗಳು ನಡೆಸಿದ ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಶಿವಯೋಗಮಂದಿರ ಸಂಸ್ಥೆಗೆ ಹಿಂದೆ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಸಂಗನಬಸವ ಸ್ವಾಮೀಜಿ, ಐದು ತಿಂಗಳ ಹಿಂದೆ ಲಿಂಗೈಕ್ಯರಾಗಿದ್ದರು. ಸಂಗನಬಸವ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ಶಿವಯೋಗಮಂದಿರದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ.
ಇನ್ನೂ ಸಭೆಯಲ್ಲಿ ಕೋಡಿಮಠದ ಪೂಜ್ಯರು, ಇಳಕಲ್ ಮಹಾಂತ ಸ್ವಾಮೀಜಿ, ನಂದವಾಡಗಿ ಪಟ್ಟದ ದೇವರು, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ರೋಣದ ಮಾಜಿ ಶಾಸಕ ಜಿ.ಎಸ್.ಪಾಟೀಲ, ಶಿವಯೋಗ ಮಂದಿರದ ಟ್ರಸ್ಟಿ ಎಂ.ಬಿ.ಹಂಗರಗಿ, ಎಂ.ಡಿ.ಯಲಿಗಾರ, ಶರಣಗೌಡ ಪಾಟೀಲ ಮತ್ತಿತರರು ಭಾಗಿಯಾಗಿದ್ದರು,
ಈ ಶಿವಯೋಗಮಂದಿರ ವೀರಶೈವ ಲಿಂಗಾಯತರ ಶ್ರದ್ದಾಕೇಂದ್ರವಾಗಿದೆ. ಸುಮಾರು ೧೧೦ ವರ್ಷಗಳ ಹಿಂದೆ ಲಿಂಗೈಕ್ಯ ಹಾನಗಲ್ ಕುಮಾರೇಶ್ವರ ಸ್ವಾಮೀಜಿ ಶಿವಯೋಗಮಂದಿರವನ್ನು ಸ್ಥಾಪಿಸಿದ್ದಾರೆ. ಈ ಮಂದಿರದ ವೈಶಿಷ್ಟ್ಯ ಅಂದರೆ ನಾಡಿನ ವೀರಶೈವ ಲಿಂಗಾಯತ ಮಠಗಳಿಗೆ ಸ್ವಾಮೀಜಿಗಳನ್ನು ತಯಾರಿಸುತ್ತದೆ, ಈ ಮಂದಿರವು ವಟುಗಳ ವಿಶ್ವವಿದ್ಯಾಲಯವೆಂದು ಹೆಸರುವಾಸಿಯಾಗಿದೆ.
ಈ ಶಿವಯೋಗ ಮಂದಿರಲ್ಲಿ ವಟುಗಳಿಗೆ ತರಬೇತಿ ,ಸಂಸ್ಕೃತ ಪಾಠ ಪ್ರವಚನ,ಧಾರ್ಮಿಕ ಸಂಸ್ಕಾರ ದೀಕ್ಷೆ ನೀಡಿ ಸ್ವಾಮೀಜಿಗಳನ್ನು ತಯಾರು ಮಾಡುತ್ತಾರೆ. ಅಷ್ಟೇ ಅಲ್ಲದೇ ಮಂದಿರವು ಶುದ್ದ ವಿಭೂತಿ ತಯಾರಿಗೆಕೆ ಹೆಸರಾದ ಧಾರ್ಮಿಕ ಕೇಂದ್ರವಾಗಿದೆ.