ಧಾರವಾಡ : ಲಾಕ್ ಡೌನ್ ಮುಂಚೆ ಮದ್ಯ ಮಾರಾಟ ಇತ್ತಲ್ಲ, ಆಗ ಯಾಕೆ ಮದ್ಯ ನಿಷೇಧದ ಬಗ್ಗೆ ಚರ್ಚೆ ಆಗಲಿಲ್ಲ ಎಂದು ಸಚಿವ ಜಗದೀಶ ಶೆಟ್ಟರ್ ಮದ್ಯ ನಿಷೇಧ ಮಾಡಿ ಎಂದವರ ವಿರುದ್ಧ ಕಿಡಿಕಾಡಿದ್ದಾರೆ.
ಮದ್ಯ ಮಾರಾಟ ನಿಷೇಧಕ್ಕೆ ಬಿಜೆಪಿ ಶಾಸಕ ಆಗ್ರಹಿಸಿದ ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿದ ಅವರು, ವೈಯಕ್ತಿಕ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ ನಡೆಸುವುದು ಬೇರೆ, ಅಭಿಪ್ರಾಯ ಹೇಳುವುದು ಬೇರೆ. ಎಲ್ಲೆಲ್ಲಿ ಅಭಿಪ್ರಾಯ ಹೇಳಬೇಕು ಅಲ್ಲಿ ಹೇಳುತ್ತೇವೆ. ವೈಯಕ್ತಿಕವಾಗಿ ಜನರೇ ಮದ್ಯ ಬೇಡ ಎನ್ನಬೇಕು ಎಂದು ಹೇಳಿದರು.
ಜನ ಸಹಕಾರ ಕೊಟ್ಟಾಗ ಮಾತ್ರ ಲಾಕ್ ಡೌನ್ ಯಶಸ್ಸು ಆಗುತ್ತದೆ. ಹಾಗೆಯೇ ಜನ ಮದ್ಯಪಾನ ಮಾಡುವುದಿಲ್ಲ ಎಂದು ನಿರ್ಣಯ ತಗೊಳ್ಳಲಿ. ಎಲ್ಲವನ್ನು ಸರ್ಕಾರವೇ ಮಾಡಬೇಕಾ? ಕುಡುಕರಿಗೆ ಮಠಕ್ಕೆ ಪ್ರವೇಶ ಇಲ್ಲ ಎಂದು ಮಠಾಧೀಶರು ಹೇಳಲಿ. ಸ್ವಾಮೀಜಿಗಳು, ಧರ್ಮಗುರುಗಳು, ಪ್ರಾರ್ಥನಾ ಮಂದಿರಗಳು ನಿರ್ಧಾರ ತೆಗೆದುಕೊಳ್ಳಲಿ ಎಂದು ಗರಂ ಆದರು.
ಇನ್ನು ಬಿಹಾರ, ಗುಜರಾತ್ ನಲ್ಲಿ ಮದ್ಯ ಮಾರಾಟ ನಿಷೇಧ ವಿಚಾರವಾಗಿ ಮಾತನಾಡಿದ ಅವರು, ಒಂದು ಸಲ ಬಿಹಾರ ಗುಜರಾತ್ ಹೋಗಿ ನೋಡಿ ಬನ್ನಿ, ಅಲ್ಲಿ ಏನ್ ನಡೆಯುತ್ತದೆ ಎಂದು ಇಲ್ಲಿ ಡಿಬೇಟ್ ಮಾಡೋದಲ್ಲ ಎಂದು ಗುಜರಾತ್ ನಲ್ಲಿ ಮದ್ಯ ಮಾರಾಟ ಇದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.