ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಪೂರೈಸಿರುವ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಕಂಬಿ ಸೆರೆವಾಸದಿಂದ ಮುಕ್ತರಾಗಿದ್ದಾರೆ.
ಇಂದಿನಿಂದ ಶಶಿಕಲಾ ಜೈಲು ಹಕ್ಕಿಯಲ್ಲ, ಫ್ರೀ ಬರ್ಡ್. ನಾಲ್ಕು ವರ್ಷಗಳ ಜೈಲು ಶಿಕ್ಷೆಯ ಅವಧಿ ಇಂದಿಗೆ ಕೊನೆಗೊಂಡ ಹಿನ್ನೆಲೆಯಲ್ಲಿ ವಿ.ಕೆ ಶಶಿಕಲಾ ನಟರಾಜನ್ ಅವರನ್ನು ಸೆರೆವಾಸದಿಂದ ಅಧಿಕೃತವಾಗಿ ಮುಕ್ತಗೊಳಿಸಲಾಗಿದೆ.
ಆದರೆ, ಕಳೆದ ವಾರ ಕೊರೊನಾ ಸೋಂಕು ತಗುಲಿದ್ದರಿಂದ ವಿ.ಕೆ ಶಶಿಕಲಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಲು ಇನ್ನೂ ಒಂದು ವಾರ ಕಾಯಬೇಕಾಗಿದೆ.
ಜೈಲು ಶಿಕ್ಷೆ ಬಿಡುಗಡೆ ಪ್ರಕ್ರಿಯೆ ಪೂರ್ಣ
ವಿ.ಕೆ ಶಶಿಕಲಾ ನಟರಾಜನ್ ಜೈಲು ಶಿಕ್ಷೆ ಅವಧಿ ಇಂದು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಬಿಡುಗಡೆ ಸಂಬಂಧ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಪಿಪಿಇ ಕಿಟ್ ಧರಿಸಿ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ್ದ ಜೈಲು ಅಧಿಕಾರಿಗಳು, ಶಶಿಕಲಾ ಅವರಿಂದ ಸಹಿ ಪಡೆದು ಬಿಡುಗಡೆಗೆ ಬೇಕಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮೂಲಕ ಜೈಲು ಶಿಕ್ಷೆಯಿಂದ ಮುಗಿದಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ಹೀಗಾಗಿ ಶಶಿಕಲಾ ಅವರು ಮತ್ತೆ ಜೈಲಿಗೆ ತೆರಳಿ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸುವ ಅಗತ್ಯವಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಿಂದಲೇ ಮನೆಗೆ ತೆರಳಬಹುದು ಎಂದು ಆಸ್ಪತ್ರೆಗೆ ಅಧಿಕೃತ ಪತ್ರ ನೀಡಿದ್ದಾರೆ.

ಶಶಿಕಲಾ ಜೈಲು ಶಿಕ್ಷೆಯಿಂದ ಬಿಡುಗಡೆ ಸಂಬಂಧ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಅವರು ಈಗ ಖೈದಿ ಅಲ್ಲ. ಈ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಈ ಹಿಂದೆ ಕುಟುಂಬಸ್ಥರು ಕೋರಿದ್ದರು. ಆದರೆ, ಜೈಲಿನ ಪ್ರೋಟೋಕಾಲ್ ಪ್ರಕಾರ ಶಿಫ್ಟ್ ಮಾಡಲು ಸಾಧ್ಯವಿರಲಿಲ್ಲ. ಆದರೆ, ಇಂದು ಅವರು ಜೈಲಿನಿಂದ ರಿಲೀಸ್ ಆಗಿರುವುದರಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.
ವಿ.ಕೆ ಶಶಿಕಲಾ ಜತೆ ಸಂಬಂಧಿ ಇಳವರಸಿ ಮತ್ತು ಸೋದರಳಿಯ ಸುಧಾಕರ್ ಜೈಲುವಾಸ ಕೂಡ ಇಂದಿಗೆ ಮುಕ್ತಾಯವಾಗಿದೆ. ಶಶಿಕಲಾ ಅವರೊಂದಿಗೆ ಇಳವರಸಿ ಅವರಿಗೂ ಕೊರೋನಾ ಸೋಂಕು ತಗುಲಿದೆ. ಹೀಗಾಗಿ, ಅವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಬಲಿಗರ ಸಂಭ್ರಮಾಚರಣೆ
ಶಶಿಕಲಾ ನಟರಾಜನ್ ಬಿಡುಗಡೆಯಾದ ಸುದ್ದಿ ತಿಳಿಯುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಯತ್ತ ದೌಡಾಯಿಸಿದ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು. ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಬಳಿಕ ಶಶಿಕಲಾ ಅವರನ್ನು ತಮಿಳುನಾಡಿನ ಹೊಸೂರಿನಿಂದ ಎಲ್ಲಾ ಜಿಲ್ಲೆಗಳಿಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು ಎಂದು ಬೆಂಬಲಿಗರು ತಿಳಿಸಿದ್ದಾರೆ.
ಏನಿದು ಪ್ರಕರಣ..!
56 ಕೋಟಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ, ವಿ.ಕೆ ಶಶಿಕಲಾ, ಇಳವರಸಿ ಹಾಗೂ ಸುಧಾಕರ್‍ಗೆ 2017ರಲ್ಲಿ ಸುಪ್ರೀಂಕೋರ್ಟ್ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಖಾಯಂಗೊಳಿಸಿತ್ತು. ಆದರೆ, ಅಷ್ಟರೊಳಗೆ ಜಯಲಲಿತಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಶಶಿಕಲಾ ನಟರಾಜನ್ ಸೇರಿ ಮೂವರೂ 2017ರ ಫೆಬ್ರವರಿಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








