ಜೈಪುರದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮತ್ತೊಂದು ದೊಡ್ಡ ಕ್ರಿಕೆಟ್ ಮೈದಾನ…!
ಭಾರತದಲ್ಲಿ ಮತ್ತೊಂದು ಹೈಫೈ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದೆ. ಮೆಲ್ಬರ್ನ್, ಮೊಟೇರಾ ಕ್ರೀಡಾಂಗಣದ ಬಳಿಕ ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಇದಾಗಲಿದೆ. ಅಂದ ಹಾಗೇ ಈ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಮುಂದಾಗಿರುವುದು ರಾಜಸ್ತಾನ ಕ್ರಿಕೆಟ್ ಸಂಸ್ಥೆ.
ಜೈಪುರ- ದೆಹಲಿ ನ್ಯಾಷನಲ್ ಹೈವೆಯ ಮಧ್ಯೆ ಈ ಕ್ರೀಡಾಂಗಣ ತಲೆ ಎತ್ತಲಿದೆ. ಜೈಪುರದಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ಚೊಂಪ್ ಗ್ರಾಮದಲ್ಲಿ ಈ ಹೈ ಫೈ ಕ್ರೀಡಾಂಗಣಕ್ಕೆ ನೀಲ ನಕ್ಷೆ ರೂಪಿಸಲಾಗಿದೆ. ಸುಮಾರು ನೂರು ಎಕರೆ ವಿಸ್ತಿರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಈ ಕ್ರೀಡಾಂಗಣದ ಒಟ್ಟು ಕಾಮಗಾರಿ ವೆಚ್ಚ 350 ಕೋಟಿ ರೂಪಾಯಿ ಆಗಲಿದೆ ಎಂದು ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮಹೇಂದ್ರ ಶರ್ಮಾ ತಿಳಿಸಿದ್ದಾರೆ.
ಈ ಕ್ರೀಡಾಂಗಣದಲ್ಲಿ ಸುಮಾರು 75 ಸಾವಿರ ಪ್ರೇಕ್ಷಕರು ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದೆ. ಅಹಮ್ಮದಾಬಾದ್‍ನ ಮೊಟೇರಾ ಕ್ರೀಡಾಂಗಣದಲ್ಲಿ 1.10 ಲಕ್ಷ ಪ್ರೇಕ್ಷಕರು ಹಾಗೂ ಮೆಲ್ಬರ್ನ್ ಕ್ರೀಡಾಂಗಣದಲ್ಲಿ 1.02 ಪ್ರೇಕ್ಷಕರು ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದೆ. ಹೀಗಾಗಿ ಇದು ವಿಶ್ವದ ಅತೀ ದೊಡ್ಡ ಮೂರನೇ ಕ್ರೀಡಾಂಗಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕ್ರೀಡಾಂಗಣದ ಕಾಮಗಾರಿ ಮುಂದಿನ ನಾಲ್ಕೈದು ತಿಂಗಳಲ್ಲಿ ಆರಂಭವಾಗಲಿದೆ. ಮೆಹ್ತಾ ಆಂಡ್ ಆಸೋಸಿಯೇಟ್ಸ್ ಎಲ್‍ಎಲ್‍ಪಿ ಮತ್ತು ದೆಹಲಿ ಮೂಲದ ಜಿಆರ್‍ಎಸ್ ಸ್ಪೋಟ್ರ್ಸ್ ಡಿಸೈನ್ ಕಂಪೆನಿಯು ಕ್ರೀಡಾಂಗಣದ ಕಾಮಗಾರಿಯನ್ನು ವಹಿಸಿಕೊಂಡಿದೆ.
ಇನ್ನು ಈ ಕ್ರೀಡಾಂಗಣದಲ್ಲಿ ಒಳಾಂಗಣದ ಕ್ರೀಡೆಗಳ ಸೌಲಭ್ಯಗಳೂ ಇವೆ. ಹಾಗೇ ಕ್ರೀಡಾ ತರಬೇತಿ ಅಕಾಡೆಮಿ, ಕ್ಲಬ್ ಹೌಸ್ ಜೊತೆಗೆ ಸುಮಾರು ನಾಲ್ಕು ಸಾವಿರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯಗಳಿವೆ. ಇನ್ನು ಮೈದಾನದಲ್ಲಿ ಎರಡು ಅಭ್ಯಾಸದ ಮೈದಾನಗಳಿವೆ. ಈ ಮೈದಾನಗಳಲ್ಲಿ ರಣಜಿ ಪಂದ್ಯಗಳನ್ನು ಆಯೋಜಿಸಲಾಗುವುದು. ಹಾಗೇ ಪ್ರೇಕ್ಷಕರಿಗೆ ಎರಡು ರೆಸ್ಟೋರೆಂಟ್‍ಗಳೂ ಇವೆ. ಜೊತೆಗೆ 30 ನೆಟ್ಸ್ ಪಿಚ್‍ಗಳು, ಸುದ್ದಿಗೋಷ್ಠಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದ್ರು.
ಹಾಗೇ ಕ್ರೀಡಾಂಗಣದ ನಿರ್ಮಾಣಕ್ಕೆ ರಾಜಸ್ತಾನ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐ 90 ಕೋಟಿ ರೂ, ನೀಡಲಿದೆ. ಹಾಗೇ ಬಿಸಿಸಿಐ 100 ಕೋಟಿ ರೂ ಅನುದಾನವನ್ನು ನೀಡಲಿದೆ. ಅಲ್ಲದೆ 100 ಕೋಟಿ ರೂಪಾಯಿ ಬ್ಯಾಂಕ್ ಸಾಲ ಮತ್ತು 60 ಕೋಟಿ ರೂಪಾಯಿ ಕ್ರೀಡಾಂಗಣದ ಕಾರ್ಪೊರೇಟ್ ಬಾಕ್ಸ್ ನಿಂದ ಬರಲಿದೆ ಎಂದು ಮಹೇಂದ್ರ ಶರ್ಮಾ ಮಾಹಿತಿ ನೀಡಿದ್ದಾರೆ.
ಈ ನಡುವೆ, ಕ್ರೀಡಾಂಗಣವನ್ನು ಎರಡು ಹಂತಗಳಲ್ಲಿ ನಿರ್ಮಾಣ ಮಾಡಲಾಗುವುದು. ಮೊದಲ ಹಂತದಲ್ಲಿ 45 ಸಾವಿರ ಪ್ರೇಕ್ಷಕರು ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದೆ. ನಂತರ ಎರಡನೇ ಹಂತದ ಕಾಮಗಾರಿ ನಡೆಯಲಿದೆ. ಒಟ್ಟು ಎರಡು ಮೂರು ವರ್ಷಗಳಲ್ಲಿ ಕ್ರೀಡಾಂಗಣ ನಿರ್ಮಾಣದ ಕಾಮಗಾರಿ ಮುಗಿಯಲಿದೆ ಎಂದು ಅವರು ಹೇಳಿದ್ರು.








