ನವದೆಹಲಿ : ಭಾರತೀಯ ಸೇನೆ ಮತ್ತು ಅರೆ ಸೈನಿಕ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಯೋಜಿಸಿದೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಯೋತ್ಪಾದಕರು, ಸ್ಥಳೀಯ ಕಾಶ್ಮೀರಿಗಳನ್ನು ಬಳಸಿಕೊಂಡು ಕಾರ್ ಬಾಂಬ್ ಅಥವಾ ಆತ್ಮಾಹುತಿ ಬಾಂಬರ್ ಗಳ ಮೂಲಕ ಭಾರತೀಯ ಸೇನೆಯ ಮೇಲೆ ದಾಳಿಯನ್ನು ಮಾಡಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ವಾರವಷ್ಟೇ ಭಾರತೀಯ ಸೇನೆ ನಡೆಸಿದ ಎನ್ಕೌಂಟರ್ ಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಯಕ ರಿಯಾಜ್ ನೈಕೂ ಬಲಿಯಾಗಿದ್ದ. ಈಗ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಗಾಜಿ ಹೈದರ್ ಅಲಿಯಾಸ್ ಸೈಫುಲ್ಲಾ ಮಿರ್ ಗೆ ನಾಯಕನ ಸ್ಥಾನವನ್ನು ನೀಡಿದೆ. ಇದರ ಮೂಲಕ ಭಾರತದ ಸೈನಿಕರ ವಿರುದ್ಧ ದಾಳಿ ನಡೆಸಲು ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಗಾಜಿ ಎಂದರೆ ಇಸ್ಲಾಮಿಕ್ ಯೋಧ, ಹೈದರ್ ಅಂದ್ರೆ ಧೈರ್ಯ ಶಾಲಿ ಎಂದರ್ಥ. ಗಾಜಿ ಹೈದರ್ ನನ್ನು ತನ್ನ ನಾಯಕನನ್ನಾಗಿ ನೇಮಿಸಿಕೊಳ್ಳುವ ಮೂಲಕ ಈ ಉಗ್ರ ಸಂಘಟನೆ ತನ್ನ ಎರಡನೇ ಸಾಲಿನ ನಾಯಕತ್ವವನ್ನು ಸಿದ್ದಪಡಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.








