ಪಾಕ್ ಸರ್ಕಾರದ ಗಮನಕ್ಕೆ ಬಾರದಂತೆ ರಾಯಭಾರ ಕಚೇರಿಯನ್ನೇ ಮಾರಾಟ ಮಾಡಿದ ಜಕಾರ್ತಾ ರಾಯಭಾರಿ
ಇಸ್ಲಾಮಾಬಾದ್, ಅಗಸ್ಟ್26: ಇಂಡೋನೇಷ್ಯಾ ದೇಶದ ಮಾಜಿ ರಾಯಭಾರಿ ಮೇಜರ್ ಜನರಲ್ ಸೈಯದ್ ಮುಸ್ತಫಾ ಅನ್ವರ್ ವಿರುದ್ಧ ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (ಎನ್‌ಎಬಿ) ಬುಧವಾರ ನ್ಯಾಯಾಲಯದಲ್ಲಿ ದೋಷಾರೋಪಣೆಯನ್ನು ಸಲ್ಲಿಸಿದೆ.

ಅಕೌಂಟೆಬಿಲಿಟಿ ನ್ಯಾಯಾಲಯಕ್ಕೆ ತನ್ನ ಉಲ್ಲೇಖದಲ್ಲಿ, ಎನ್‌ಎಬಿ 2001-2002ರ ಅವಧಿಯಲ್ಲಿ ಜಕಾರ್ತಾದ ರಾಜತಾಂತ್ರಿಕ ಅಧಿಕಾರಿ ಪಾಕಿಸ್ತಾನದ ರಾಯಭಾರ ಕಟ್ಟಡವನ್ನು ರಹಸ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದೆ. ರಾಯಭಾರ ಕಚೇರಿಯ ಅಕ್ರಮ ಮಾರಾಟದಿಂದಾಗಿ ಸರ್ಕಾರದ ಬೊಕ್ಕಸಕ್ಕೆ 1.32 ಮಿಲಿಯನ್ ಡಾಲರ್ ನಷ್ಟವಾಗಿದೆ ಎಂದು ದೇಶದ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ ಸಂಸ್ಥೆ ತಿಳಿಸಿದೆ.
ವರದಿಯ ಪ್ರಕಾರ, ಮಾಜಿ ರಾಯಭಾರಿ ಅನ್ವರ್ ಅವರು ಜಕಾರ್ತಾದಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿ ನೇಮಕಗೊಂಡ ಕೂಡಲೇ ರಾಯಭಾರ ಕಟ್ಟಡವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಎನ್‌ಎಬಿಯ ಸಂಶೋಧನೆಗಳು ಬಹಿರಂಗಪಡಿಸಿದವು. ಈ ಉದ್ದೇಶಕ್ಕಾಗಿ, ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಪೂರ್ವಾನುಮತಿ ಇಲ್ಲದೆ ರಾಯಭಾರ ಕಚೇರಿ ಕಟ್ಟಡವನ್ನು ಮಾರಾಟ ಮಾಡುವ ಜಾಹೀರಾತನ್ನು ಅವರು ಅಧಿಕೃತಗೊಳಿಸಿದರು.
ಮಾರಾಟ ಪ್ರಕ್ರಿಯೆ ಪ್ರಾರಂಭವಾದ ನಂತರವೇ ಅನ್ವರ್ ಮಾರಾಟಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ವಿದೇಶಾಂಗ ಸಚಿವಾಲಯವು ಜಕಾರ್ತಾದ ರಾಯಭಾರ ಕಚೇರಿ ಕಟ್ಟಡದ ಮಾರಾಟವನ್ನು ನಿಷೇಧಿಸಿತ್ತು ಮತ್ತು ಅದನ್ನು ಅನ್ವರ್‌ಗೆ ಅನೇಕ ಪತ್ರಗಳಲ್ಲಿ ತಿಳಿಸಿತ್ತು.
ಅಧಿಕಾರ ದುರುಪಯೋಗಕ್ಕಾಗಿ ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸುಗ್ರೀವಾಜ್ಞೆಯ ಸೆಕ್ಷನ್ 9 (ಎ) 6 ರ ಅಡಿಯಲ್ಲಿ ಮೇಜರ್ ಜನರಲ್ (ನಿವೃತ್ತ) ಸೈಯದ್ ಮುಸ್ತಫಾ ಅನ್ವರ್ ತಪ್ಪಿತಸ್ಥರೆಂದು ಎನ್ಎಬಿ ದೋಷಾರೋಪಣೆಯನ್ನು ಸಲ್ಲಿಸಿದೆ.

ಪಾಕಿಸ್ತಾನದ ಮಾಧ್ಯಮಗಳ ವರದಿಗಳು ದೇಶದ ಸುಪ್ರೀಂ ಕೋರ್ಟ್ ಎನ್ಎಬಿ ಕಚೇರಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖೆ ನಡೆಸುವಾಗ ವಿಳಂಬ ಮಾಡುತ್ತಿದೆ ಎಂದು ಛೀಮಾರಿ ಹಾಕಿದೆ ಎಂದು ತಿಳಿಸಿದ್ದು, ಮುಖ್ಯ ನ್ಯಾಯಾಧೀಶರು, ಎನ್‌ಎಬಿ ಅಧಿಕಾರಿಗಳು ಸರಿಯಾದ ವಿಚಾರಣೆ ನಡೆಸಲು ಸಾಕಷ್ಟು ಸಮರ್ಥರಾಗಿಲ್ಲ ಎಂದು ತರಾಟೆಗೆ ತೆಗೆದು ಕೊಂಡಿರುವುದಾಗಿ ವರದಿ ಮಾಡಿದೆ








