ಸಿಪಿಎಲ್ 2020 : ಆಸೀಫ್ ಆಲಿ ಅಬ್ಬರ.. ಜಮೈಕಾ ತಲಾವಾಹ್ಸ್ ಶುಭಾರಂಭ
2020ರ ಕೆರೆಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಜಮೈಕಾ ತಲಾವಾಹ್ಸ್ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ತಂಡವನ್ನು ಐದು ವಿಕೆಟ್ ಗಳಿಂದ ಪರಾಭವಗೊಳಿಸಿದೆ.
ಟೂರ್ನಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಜಮೈಕಾ ತಲಾವಾಹ್ಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಸೇಂಟ್ ಲೂಸಿಯಾ ಝೌಕ್ಸ್ ತಂಡ ನಿಗದಿತ ಅಂತರದಲ್ಲಿ ತನ್ನ ವಿಕೆಟ್ ಗಳನ್ನು ಕೂಡ ಕಳೆದುಕೊಂಡಿತ್ತು. ಹೊಡಿ ಬಡಿ ಆಟಕ್ಕೆ ಮುಂದಾದ ಸೇಂಟ್ ಲೂಸಿಯಾ ತಂಡದ ಬ್ಯಾಟ್ಸ್ ಮೆನ್ ಗಳು ತಾಳ್ಮೆಯನ್ನು ಕೂಡ ಕಳೆದುಕೊಂಡ್ರು. ತಂಡದ ಪರ ರೋಸ್ಟನ್ ಚೇಸ್ ಮಾತ್ರ 42 ಎಸೆತಗಳಲ್ಲಿ 52 ರನ್ ಸಿಡಿಸಿದ್ರೆ, ನಜಿಬುಲ್ಲಾಹ್ ಝಾದ್ರಿನ್ 25 ರನ್ ಹಾಗೂ ಫ್ಲೇಚರ್ 22 ರನ್ ಗಳಿಸಿದ್ರು. ಪರಿಣಾಮ ಸೇಂಟ್ ಲೂಸಿಯಾ ತಂಡ ಏಳು ವಿಕೆಟ್ ಗೆ 158 ರನ್ ದಾಖಲಿಸಿತ್ತು. ಜಮೈಕಾ ತಲಾವಾಸ್ಹ್ ತಂಡ ಪರ ಪೆರುಮಾಲ್ ಮತ್ತು ಮುಜೀಬ್ ಉರ್ ರಹಮಾನ್ ತಲಾ ಎರಡು ವಿಕೆಟ್ ಉರುಳಿಸಿದ್ರು.
ಸವಾಲನ್ನು ಬೆನ್ನಟ್ಟಿದ್ದ ಜಮೈಕಾ ತಲಾವಾಹ್ಸ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. 13 ರನ್ ಗೆ ಎರಡು ವಿಕೆಟ್ ಕಳೆದುಕೊಂಡ ತಂಡಕ್ಕೆ ಫಿಲಿಪ್ಸ್ ಮತ್ತು ನಾಯಕ ರೊವ್ಮಾನ್ ಪೊವೆಲ್ ಆಸರೆಯಾದ್ರು. ಇವರಿಬ್ಬರು ಮೂರನೇ ವಿಕೆಟ್ಗೆ 63 ರನ್ ಪೇರಿಸಿದ್ರು. ಈ ಹಂತದಲ್ಲಿ ಪೊವೆಲ್ 26 ರನ್ಗೆ ಔಟಾದ್ರೆ, ಗ್ಲೇನ್ ಫಿಲಿಪ್ಸ್ 29 ಎಸೆತಗಳಲ್ಲಿ 44 ರನ್ ಪೇರಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಬಳಿಕ ಆಸೀಫ್ ಆಲಿ ಅವರ ಬಿರುಸಿನ ಆಟದ ಜೊತೆ ಜವಾಬ್ದಾರಿಯುತವಾಗಿ ಆಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದ್ರು. ರಸೇಲ್ 16 ರನ್ ಹಾಗೂ ಬ್ರಾತ್ ವೇಟ್ ಅಜೇಯ 18 ರನ್ ಗಳಿಸಿದ್ರು. ಆಸೀಫ್ ಆಲಿ 27 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 47 ರನ್ ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ್ರು. ಅಂತಿಮವಾಗಿ ಜಮೈಕಾ ತಲಾವಾಹ್ಸ್ ತಂಡ 18.5 ಓವರ್ ಗಳಲ್ಲಿ 160 ಐದು ವಿಕೆಟ್ ಕಳೆದು 160 ರನ್ ದಾಖಲಿಸಿತ್ತು. ಸೇಂಟ್ ಲೂಸಿಯಾ ತಂಡದ ಪರ ವಿಲಿಯಮ್ಸ್ ಎರಡು ವಿಕೆಟ್ ಪಡೆದ್ರು.








