ಯೋಧರು ಮತ್ತು ಉಗ್ರರರ ನಡುವೆ ಗುಂಡಿನ ಚಕಮಕಿ
ಜಮ್ಮು&ಕಾಶ್ಮೀರ: ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹಿಬ್ ಪ್ರದೇಶದ ಹರಿಪೋರಾ ಗ್ರಾಮದಲ್ಲಿ ಉಗ್ರರು ಇರುವಿಕೆಯ ನಿಖರ ಮಾಹಿತಿ ದೊರೆತ್ತಿತ್ತು. ಈ ಮಾಹಿತಿಯ ಆಧಾರದ ಮೇಲೆ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆ ವೇಳೆ ಯೋಧರು ಉಗ್ರರರ ಅಡಗುತಾಣವನ್ನು ಸಮೀಪಿಸುತ್ತಿದ್ದಂತೆ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸಧ್ಯ ಜಂಟಿ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕಾಶ್ಮೀರ್ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಇಬ್ಬರು ಉಗ್ರರು ಹತರಾಗಿದ್ದರು. ಅನ್ಸಾರ್ ಘಜ್ವತ್-ಉಲ್-ಹಿಂದ್ ಸಂಘಟನೆಯ ಸಫತ್ ಮುಜಾಫರ್ ಸೋಫಿ ಮತ್ತು ಎಲ್ಇಟಿ ಉಗ್ರ ಉಮರ್ ತೇಲಿ ಎಂಬುವರನ್ನು ಟ್ರಾಲ್ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ.
ಈ ಇಬ್ಬರೂ ಶ್ರೀನಗರ ನಗರದಲ್ಲಿ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಖಾನ್ಮೋಹ್ನಲ್ಲಿ ಸರಪಂಚ್ ಸಮೀರ್ ಅಹ್ಮದ್ ಹತ್ಯೆಯಲ್ಲಿ ಇವರು ಭಾಗಿಯಾಗಿದ್ದರು ಎಂದು ಕಾಶ್ಮೀರ್ ಐಜಿಪಿ ಟ್ವೀಟ್ ಮಾಡಿದ್ದರು.








