ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮಫ್ತಿ ಮತ್ತೆ ಗೃಹಬಂಧನದಲ್ಲಿ..!
ಶ್ರೀನಗರ : ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಹಾಗೂ ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮಫ್ತಿ ತಮ್ಮನ್ನ ಮತ್ತೆ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದಿದ್ದಾರೆ. ಪುಲ್ವಾಮಾಗೆ ಭೇಟಿ ನೀಡಲು ಯತ್ನಿಸಿದ ಕಾರಣಕ್ಕೆ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದಿದ್ದಾರೆ ಮೆಹಬೂಬಾ ಮಫ್ತಿ.
ಪುಲ್ವಾಮಾದ ಟ್ರಾಲ್ ಪಟ್ಟಣದಲ್ಲಿ ಕುಟುಂಬದ ಮೇಲೆ ಸೇನಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಮಫ್ತಿ ಇತ್ತೀಚೆಗಷ್ಟೇ ಆರೋಪಿಸಿದ್ದರು. ಹೀಗಾಗಿ ಹಲ್ಲೆಗೊಳಗಾದ ಕುಟುಂಬಸ್ಥರನ್ನ ಭೇಟಿ ಮಾಡುವುದಾಗಿ ತಿಳಿಸಿದ್ದರು. ಇದೇ ಕಾರಣಕ್ಕೆ ಅವರನ್ನ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಭದ್ರತಾ ಪಡೆಗಳು ಮಫ್ತಿ ಅವರ ವಾಹನವನ್ನು ಗುಪ್ಕರ್ ರಸ್ತೆಯಲ್ಲಿರುವ ಅವರ ನಿವಾಸದ ಮುಖ್ಯ ದ್ವಾರದಲ್ಲಿಯೇ ತಡೆದಿದ್ದಾರೆ ಎಂದು ಹೇಳಲಾಗಿದೆ. ಸೇನೆಯಿಂದ ದೌರ್ಜನ್ಯಕ್ಕೊಳಗಾದ ಟ್ರಾಲ್ ಹಳ್ಳಿಗೆ ಭೇಟಿ ನೀಡಲು ಪ್ರಯತ್ನಿಸಿದ್ದಕ್ಕಾಗಿ ಇಂದು ಮತ್ತೆ ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ. ಇದು ಕಾಶ್ಮೀರದ ನೈಜ ಚಿತ್ರವಾಗಿದ್ದು ಭೇಟಿ ನೀಡುವ ಗಣ್ಯರಿಗೆ ಇದನ್ನು ತೋರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.








